ಬೆಂಗಳೂರು: ಹಣದ ಕೊರತೆಯ ನೆಪವೊಡ್ಡಿ ನಿಲ್ಲಿಸಲು ಹೊರಟಿರುವ ಗರ್ಭಿಣಿ ಹಾಗೂ ಬಾಣಂತಿಯರ ಆರೋಗ್ಯದ ಹಿತದೃಷ್ಟಿಯಿಂದ ರೂಪಿಸಿದ್ದ ಮಾತೃಪೂರ್ಣ ಯೋಜನೆಗೆ ಅನುದಾನ ನಿಲ್ಲಿಸಬಾರದು‌. ಇದು ರಾಜ್ಯ ಸರ್ಕಾರ ಹೊಂದಿರುವ ಬಡವರು ಮತ್ತು ಮಹಿಳಾ ವಿರೋಧಿ ನೀತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಆಮ್ ಆದ್ಮಿ ಪಕ್ಷ (AAP) ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.


COMMERCIAL BREAK
SCROLL TO CONTINUE READING

2019ರ ಏಪ್ರಿಲ್ ತಿಂಗಳಿನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ವರದಿಯು 
'ಕರ್ನಾಟಕದ ಸಣ್ಣ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚು' ಎನ್ನುವ ಅಂಶವನ್ನು ಉಲ್ಲೇಖ ಮಾಡಿತ್ತು. ಇದನ್ನು ಕಡಿಮೆ ಮಾಡಲು ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಟಿಕ ಮತ್ತು ಆರೋಗ್ಯ ಮಟ್ಟ ಸುಧಾರಿಸಲು ಮಾತೃಪೂರ್ಣ ಯೋಜನೆ ಅತ್ಯಂತ ಪ್ರಯೋಜನಕಾರಿಯಾಗಿತ್ತು. ಈ ಯೋಜನೆ ಬಂದ ಮೇಲೆ ಗರ್ಭಿಣಿ ಹೆಣ್ಣು ಮಕ್ಕಳ ಪೌಷ್ಟಿಕತೆ ಹೆಚ್ಚಾಗಿ ಗರ್ಭಿಣಿಯರ ಹಾಗೂ ಬಾಣಂತಿಯರ ಸಾವು ಕಡಿಮೆ ಆಗಿತ್ತು ಎಂದು ಸರ್ಕಾರದ ಸಮೀಕ್ಷೆಯೇ ತಿಳಿಸಿತ್ತು. ಆದರೀಗ ರಾಜ್ಯ ಸರ್ಕಾರ ಮಾತೃಪೂರ್ಣ ಯೋಜನೆಯನ್ನು ನಿಲ್ಲಿಸಲು ಹೊರಟಿದೆ‌. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಈ ಯೋಜನೆಯನ್ನು ಕೈಬಿಡುವ ನಿರ್ಧಾರದಿಂದ ಯಾರ ಜೇಬಿನ ಹಣವನ್ನು ಉಳಿಸಲು ಸರ್ಕಾರ ಮುಂದಾಗಿದೆ ಎಂದು ರಾಜ್ಯ ಸರ್ಕಾರವನ್ನು ಆಮ್ ಆದ್ಮಿ ಪಕ್ಷ ತರಾಟೆಗೆ ತೆಗೆದುಕೊಂಡಿದೆ.


ಪ್ರಸ್ತುತ ರಾಜ್ಯದಲ್ಲಿ 4.20 ಲಕ್ಷ ಗರ್ಭಿಣಿಯರು, 4.05 ಲಕ್ಷ ಬಾಣಂತಿಯರು ಇದ್ದು ಒಟ್ಟಾರೆ 8.30 ಲಕ್ಷ ಫಲಾನುಭವಿಗಳಿಗೆ ಈ ಯೋಜನೆ ತಲುಪುತ್ತಿತ್ತು. ಆದರೆ ಕಳೆದ ಎರಡು ತಿಂಗಳಲ್ಲಿ 1250 ಮಕ್ಕಳು ಮೃತಪಟ್ಟಿರುವುದು ನೋಡಿದರೆ ಆತಂಕವಾಗುತ್ತಿದೆ. ಇಷ್ಟಾದರೂ ಸಹ ಸರ್ಕಾರ ಹೃದಯ ಹೀನರಂತೆ ವರ್ತಿಸುತ್ತಿರುವುದು ತರವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.


ಸಮೀಕ್ಷೆ ಒಂದರ ಪ್ರಕಾರ ಬೆಳಗಾವಿ, ಬಳ್ಳಾರಿ, ಕಲಬುರ್ಗಿ, ಬೆಂಗಳೂರು ನಗರ, ಗ್ರಾಮಾಂತರ, ಚಿತ್ರದುರ್ಗ, ರಾಯಚೂರು, ಬೀದರ್, ತುಮಕೂರು ಹೀಗೆ ಕರ್ನಾಟಕದ ಒಂದಷ್ಟು ಜಿಲ್ಲೆಗಳಲ್ಲಿ ಅಗತ್ಯ ಪೌಷ್ಟಿಕಾಂಶಗಳ ಕೊರತೆಯಿಂದ ಹೆಚ್ಚಿನ ಹೆಣ್ಣುಮಕ್ಕಳು ಬಳಲುತ್ತಿದ್ದಾರೆ. ಕೊರೊನಾ ನೆಪದಲ್ಲಿ ಈ ಯೋಜನೆಯ ನೆರವು ಸಿಗದೆ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯೊಂದರಲ್ಲೆ ಸುಮಾರು 65 ಕ್ಕೂ ಹೆಚ್ಚು ಹಸುಗೂಸುಗಳು ಏಪ್ರಿಲ್ ತಿಂಗಳಲ್ಲಿ ಸಾವನ್ನಪ್ಪಿವೆ. ಇದು ತಿಳಿದಿದ್ದರೂ ಸಹ ಸರ್ಕಾರ ಹೃದಯ ಹೀನರಂತೆ ವರ್ತಿಸುತ್ತಿರುವುದು ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರ ಘನತೆಗೆ ಶೋಭೆಯಲ್ಲ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಪತ್ರಿಕಾ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.


ರಾಯಚೂರು ಜಿಲ್ಲೆಯೊಂದರಲ್ಲೆ 2017 ಮತ್ತು 18 ರಲ್ಲಿ ಕ್ರಮವಾಗಿ 173, 411 ಮಕ್ಕಳು ಸಾವನ್ನಪ್ಪಿದ್ದಾವೆ. ತಮ್ಮ ಜಿಲ್ಲೆಗಳ ವಾಸ್ತಾವಾಂಶದ ಅರಿವಿದ್ದ ಅಧಿಕಾರಿಗಳು ಹಸುಗೂಸುಗಳ ಪ್ರಾಣ ಉಳಿಸಲು ನಯಾಪೈಸೆಯಷ್ಟು ಶ್ರಮ ಪಡದೆ ಅನುದಾನ ಕಡಿತಗೊಂಡರೂ ಸರ್ಕಾರಕ್ಕೆ ಮನವಿ ಮಾಡದೆ ಕುಳಿತಿರುವುದು ನೋಡಿದರೆ ವ್ಯವಸ್ಥೆ ಎಷ್ಟು ಹೃದಯಹೀನವಾಗಿದೆ ಎಂಬುದು ತಿಳಿಯುತ್ತದೆ ಎಂದು ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ‌.


ತಾಲ್ಲೂಕು ಕೇಂದ್ರಗಳಲ್ಲೂ ನೊಂದ ಮಹಿಳೆಯರಿಗೆ ಭರವಸೆ, ಆಶ್ರಯ, ಸಾಂತ್ವನ ನೀಡುತ್ತಿದ್ದ ಸಾಂತ್ವನ ಕೇಂದ್ರಗಳನ್ನು ಮುಚ್ಚಲು ಹೊರಟಿತ್ತು. ಇದಕ್ಕೆ ರಾಜ್ಯದ ಪ್ರಮುಖರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲೆ ನಿರ್ಧಾರವನ್ನು ಹಿಂಪಡೆಯಿತು. ಅದೇ ರೀತಿ ಮಾತೃಪೂರ್ಣ ಯೋಜನೆಯು ಅನೇಕ ಹೆಣ್ಣುಮಕ್ಕಳಿಗೆ ಸಹಕಾರಿಯಾಗಿದ್ದು ಈ ಯೋಜನೆಯನ್ನೂ ಮುಂದುವರಿಸಬೇಕು ಎಂಬುದು ಆಮ್ ಆದ್ಮಿ ಪಕ್ಷದ ಬೇಡಿಕೆ ಎಂದು ತಿಳಿಸಿದ್ದಾರೆ.


ಕೊರೊನಾ ಸಮಯದಲ್ಲಿ ಹೊರಗಡೆ ಎಲ್ಲೂ ಕಾಣದ ಕರ್ನಾಟಕ ರಾಜ್ಯಸರ್ಕಾರವು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆಯವರು ತಮ್ಮ ಇಲಾಖೆಯ ಅಧಿಕಾರಿಗಳಿಗೆ ಕೆಲಸ ಮಾಡಲು ಹೇಳದೆ ತಾವೇ ಕಾಣೆಯಾಗಿದ್ದಾರೆ. ಮುಂದಿನ ಮಕ್ಕಳ ಭವಿಷ್ಯವೇ ಆತಂಕದಲ್ಲಿ ಇರುವಾಗ ಹೆಣ್ಣು ಮಕ್ಕಳಿಗೆ ಧೈರ್ಯ ಹೇಳಬೇಕಾಗಿದ್ದ ಸಚಿವರು ಕಾಣೆಯಾಗಿದ್ದಾರೆ. ಆದ ಕಾರಣ ಸಚಿವರನ್ನು ನೇರ ಹೊಣೆ ಮಾಡಿ ಯಡಿಯೂರಪ್ಪನವರು ರಾಜೀನಾಮೆ ಪಡೆಯಬೇಕು ಎಂದು ದೀಪಕ್ ಜೈನ್ ಒತ್ತಾಯಿಸಿದ್ದಾರೆ.


ಈಗಾಗಲೇ ರಾಜ್ಯದಲ್ಲಿ 6 ಲಕ್ಷಕ್ಕೂ ಅಧಿಕ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇಂದು ಪ್ರತಿ ಇಬ್ಬರು ಮಹಿಳೆಯರಲ್ಲಿ ಒಬ್ಬ ಮಹಿಳೆ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಈ ರೀತಿಯಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಮತ್ತು ರಕ್ತಹೀನತೆಯಿಂದ ಬಳಲುತ್ತಿರುವ ತಾಯಂದಿರಿಗೆ ಈ ಮಾತೃಪೂರ್ಣ ಯೋಜನೆಯು ಸಹಕಾರಿಯಾಗಿತ್ತು. ಇಂತಹ ಸಂಕಷ್ಟಮಯ ಪರಿಸ್ಥಿತಿಯಲ್ಲಿ ಈ ಯೋಜನೆಯನ್ನು ಏಕಾಏಕಿ ನಿಲ್ಲಿಸುವುದು ಅಮಾನವೀಯ ನಡೆ. ಈ ಕೂಡಲೇ ಈ ಯೋಜನೆಯನ್ನು ಕೈಬಿಡದೆ ಮುಂದುವರಿಸಬೇಕೆಂದು ಆಮ್ ಆದ್ಮಿ ಪಕ್ಷ ಒತ್ತಾಯಿಸುತ್ತದೆ ಎಂದಿದ್ದಾರೆ.