ಬೆಂಗಳೂರು: ಅವಧಿ ಮುಕ್ತಾಯಗೊಂಡಿರುವ ಗ್ರಾಮ ಪಂಚಾಯಿತಿಗಳನ್ನು ರಾಜ್ಯ ಸರ್ಕಾರ ಬಿಜೆಪಿ ಅಡ್ಡೆಯನ್ನಾಗಿ ಪರಿವರ್ತಿಸಲು  ಹೊರಟಿದೆ ಎಂದು ಆಮ್ ಆದ್ಮಿ ಪಕ್ಷ ಖಂಡನೆ ವ್ಯಕ್ತಪಡಿಸಿದೆ.


COMMERCIAL BREAK
SCROLL TO CONTINUE READING

ಪತ್ರಿಕಾ ಪ್ರಕಟಣೆ ಹೊರಡಿಸಿರುವ ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್ ವಿ ಸದಂ, ಯಾವುದೇ ದುರಂತ ಆದರೂ ಅದನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಬಿಜೆಪಿ, ಕೊರೋನಾ ಸೋಂಕನ್ನು ನೆಪವಾಗಿಟ್ಟುಕೊಂಡು ಗ್ರಾಮ ಪಂಚಾಯಿತಿ ಚುನಾವಣೆಯನ್ನು 6 ತಿಂಗಳು ಮುಂದೂಡುತ್ತಿದೆ. ಇದು ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ನಡೆ. ಹಿಂಬಾಗಿಲಿನ ಮೂಲಕ ಅಧಿಕಾರ ಹಿಡಿಯುವ ನೀಚ ಬುದ್ದಿಯನ್ನು ಇತಿಹಾಸದುದ್ದಕ್ಕೂ ಮಾಡಿಕೊಂಡು ಬಂದಿರುವ ಶಿಸ್ತಿನ ಪಕ್ಷಕ್ಕೆ ಈ ಕೆಲಸ ಹೊಸದೇನಲ್ಲ ಎಂದು ಟೀಕಿಸಿದ್ದಾರೆ.


ರಾಜ್ಯದಲ್ಲಿ ಒಟ್ಟಾರೆ 6,012 ಗ್ರಾಮ ಪಂಚಾಯತಿಗಳಿದ್ದು, ಕೆಲವು ಪಂಚಾಯಿತಿಗಳನ್ನು ಹೊರತುಪಡಿಸಿದರೆ, ಬಹುತೇಕ  ಪಂಚಾಯಿತಿಗಳ ಅವಧಿ ಜೂನ್ ವೇಳೆಗೆ ಕೊನೆಯಾಗಲಿದೆ. ಲಾಕ್‌ಡೌನ್ ನಿಧಾನವಾಗಿ ಸಡಿಲಗೊಳ್ಳುತ್ತಿದೆ. ಈ ಹೊತ್ತಿನಲ್ಲಿ  ಚುನಾವಣೆಯನ್ನು 6 ತಿಂಗಳು ಮುಂದೂಡಲು ಚುನಾವಣಾ ಆಯೋಗಕ್ಕೆ ಈಗಾಗಲೇ ಸರ್ಕಾರವು ಪತ್ರ ಬರೆದಿದೆ ಎಂದು ತಿಳಿಸಿದ್ದಾರೆ.


ಚುನಾವಣಾ ಆಯೋಗದಿಂದ ಇದುವರೆವಿಗೂ ಸ್ಪಷ್ಟವಾದ ನಿರ್ಧಾರ ಪ್ರಕಟವಾಗಿಲ್ಲ. ಈ ಮಧ್ಯೆ ಖಾಲಿಯಾಗುವ ಸ್ಥಾನಗಳಿಗೆ ಚುನಾಯಿತ ಪ್ರತಿನಿಧಿಗಳ ಬದಲು ಆಡಳಿತ ಮಂಡಳಿಯನ್ನು ನಿಯೋಜಿಸಲು ಹೊರಟಿರುವುದು ನೋಡಿದರೆ ಸೌಹಾರ್ದಯುತವಾಗಿ ಬದುಕುತ್ತಿರುವ ಗ್ರಾಮಗಳಲ್ಲೂ ಕೋಮುವಾದವನ್ನು ಹರಡಿ  ಅಧಿಕಾರ ಪಡೆಯುವ ಹುನ್ನಾರ ಮಾಡಿರಬಹುದು ಎನಿಸಲಿದೆ ಎಂದು‌ ಕಳವಳ ವ್ಯಕ್ತಪಡಿಸಿದ್ದಾರೆ.


ಈಗಾಗಲೇ ಆರ್ ಎಸ್ ಎಸ್  ಹಾಗೂ ಬಿಜೆಪಿ ಕಾರ್ಯಕರ್ತರನ್ನು ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲಿಯೂ ನಾಮನಿರ್ದೇಶನ ಸದಸ್ಯರನ್ನಾಗಿಸುವ ಪ್ರಕ್ರಿಯೆ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ನೆಲೆ ಇಲ್ಲದ ಬಿಜೆಪಿ ವಾಮಮಾರ್ಗದ ಮೂಲಕ ಹಣ ಹಾಗೂ ಅಧಿಕಾರವನ್ನು ಕಬಳಿಸುವ ಕೆಟ್ಟ ಚಾಳಿ ಇದಾಗಿದೆ‌‌. ಬಿಜೆಪಿ ತನ್ನ ಅಜೆಂಡಾವನ್ನು ಎಲ್ಲಾ ಕಡೆ ಪಸರಿಸಲು ಈ ಸಂದಿಗ್ಧ ಪರಿಸ್ಥಿತಿಯನ್ನು ಬಳಸಿಕೊಳ್ಳುತ್ತಿರುವುದು ನಾಚೀಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದ್ದಾರೆ.


ನಾಲ್ಕು ಬಾರಿ ಮುಖ್ಯಮಂತ್ರಿ ಆಗಿರುವ  ಬಿ.ಎಸ್. ಯಡಿಯೂರಪ್ಪ ಇದುವರೆಗೂ ಒಂದು ಬಾರಿಯೂ ಬಹುಮತವನ್ನು ಪಡೆಯದೇ ಕೇವಲ ಆಪರೇಷನ್ ಕಮಲ ಎನ್ನುವ ಕೆಟ್ಟ ಸಂಪ್ರದಾಯದ ಮೂಲಕವೇ ಅಧಿಕಾರ ಹಿಡಿದಿರುವುದಲ್ಲದೇ. ಗ್ರಾಮ ಪಂಚಾಯಿತಿಗಳಲ್ಲೂ ಸಹ ಇದೇ ರೀತಿಯ ರಾಜಕಾರಣ ಮಾಡಲು ಹೊರಟಿರುವುದನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.


ಅಧಿಕಾರ ಹಿಡಿದ ಕಡೆಯೆಲ್ಲಾ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸುವುದನ್ನೆ ಚಾಳಿ ಮಾಡಿಕೊಂಡಿರುವ ಬಿಜೆಪಿಯ ನಾಯಕರು ಲಾಕ್‌ಡೌನ್ ವೇಳೆ ಹಂಚಲು ಇದ್ದ ಆಹಾರವನ್ನೂ ಕದ್ದು ತಮ್ಮ ಹೆಸರಿನಲ್ಲಿ ಹಂಚಿದ್ದಾರೆ. ಬಿಬಿಎಂಪಿಯ ಕಡತಗಳ ಕೊಠಡಿಯನ್ನೇ ಸುಟ್ಟು ಹಾಕಿದ್ದಾರೆ. ಗಣಿ ಹಗರಣದ ಮೂಲಕ ‌ಲೂಟಿ ಮಾಡಿದ್ದ ಬಿಜೆಪಿ ಈಗ ಅಧಿಕಾರ ವಿಕೇಂದ್ರೀಕರಣ ಮೂಲ ಆಶಯಕ್ಕೆ ಕೊಡಲಿ ಪೆಟ್ಟು ಕೊಡಲು ಮುಂದಾಗಿದೆ ಎಂದು ಹೇಳಿದ್ದಾರೆ.


ಸಂಘ ಪರಿವಾರದ ಸೂಚನೆಯಂತೆ ಮೂಲೆ ಮೂಲೆಯಲ್ಲಿರುವ ಬಿಜೆಪಿ ಕಾರ್ಯಕರ್ತರನ್ನು ಆಯಾ ಕಟ್ಟಿನ ಜಾಗದಲ್ಲಿ ಕೂರಿಸುತ್ತಿರುವುದು ನೋಡಿದರೆ ಯಾವುದೇ ನಿರ್ಧಾರದ ಮೇಲೆ ಮುಖ್ಯಮಂತ್ರಿಗಳು ನಿಯಂತ್ರಣ ಹೊಂದಿಲ್ಲ ಎನ್ನಬಹುದು. ಈ ರೀತಿಯ ಅಧಿಕಾರದ ಲಾಲಸೆಯನ್ನು ಬಿಟ್ಟು ಸಂಕಷ್ಟದಲ್ಲಿ ಇರುವ ಜನತೆಗೆ ಸಹಾಯ ಮಾಡುವ ಬುದ್ಧಿಯನ್ನು ಬೆಳೆಸಿಕೊಳ್ಳಿ ಎಂಬುದು ಆಮ್ ಆದ್ಮಿ ಪಕ್ಷದ ಸಲಹೆಯಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಜಗದೀಶ್ ವಿ ಸದಂ ತಿಳಿಸಿದ್ದಾರೆ.