ಬೆಂಗಳೂರು: ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ರನ್ನು ಬುಧವಾರ ಕಡೆಗೂ ಬಂಧಿಸಲಾಗಿದೆ. 


COMMERCIAL BREAK
SCROLL TO CONTINUE READING

ಜನವರಿ 20ರಂದು ಈಗಲ್ ಟನ್ ರೆಸಾರ್ಟ್‌ನಲ್ಲಿ ವಿಜಯನಗರ ಶಾಸಕ ಆನಂದ್‌ ಸಿಂಗ್‌ ಮೇಲೆ ಕಂಪ್ಲಿ ಶಾಸಕ ಗಣೇಶ್ ಮಾರಣಾಂತಿಕ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಶಾಸಕ ಗಣೇಶ್ ಅವರನ್ನು ಬಿಡದಿ ಪೋಲೀಸರು ಬಂಧಿಸಿದ್ದಾರೆ.


ಆನಂದ್‌ ಸಿಂಗ್‌ ಮೇಲೆ ಹಲ್ಲೆ ನಡೆಸಿದ ಬಳಿಕ ಮರುದಿನ ಅಂದ್ರೆ ಜನವರಿ 21ರಂದು ಬಿಡದಿ ಪೊಲೀಸ್‌ ಠಾಣೆಯಲ್ಲಿ ಗಣೇಶ್ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಅಂದು ರೆಸಾರ್ಟ್‌ನಿಂದ ಓಡಿಹೋಗಿದ್ದ ಶಾಸಕ ಗಣೇಶ್ ಫೆ.20 ರಂದು ಗುಜರಾತ್ ನಲ್ಲಿ ಸೆರೆಸಿಕ್ಕಿದ್ದಾರೆ.


ಗುಜರಾತ್‌ನ ಸುಖಸಾಗರ್‌ ಹೋಟೆಲ್‌ನಲ್ಲಿ ಗಣೇಶ್‌ ಅಡಗಿದ್ದಾರೆಂಬ ಮಾಹಿತಿ ಸಿಗುತ್ತಿದ್ದಂತೆ ಬಿಡದಿ ಪೊಲೀಸರ ತಂಡ ಮೂರು ದಿನಗಳ ಹಿಂದೆಯೇ ಅಲ್ಲಿಗೆ ದೌಡಾಯಿಸಿತ್ತು. ಗುಜರಾತ್‌ ಪೊಲೀಸರಿಗೆ ಮಾಹಿತಿ ನೀಡಿ ಅವರ ನೆರವೊಂದಿಗೆ ಬುಧವಾರ(ಫೆ.20) ರಂದು ಮಧ್ಯಾಹ್ನ 2 ಗಂಟೆಗೆ ಅವರನ್ನು ಬಂಧಿಸಲಾಗಿದೆ.


ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವ ಎಂ.ಬಿ. ಪಾಟೀಲ್, ಬುಧವಾರ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಗುಜರಾತ್ ನ ಸೋಮನಾಥದಲ್ಲಿ ಕಂಪ್ಲಿ ಗಣೇಶ್ ರನ್ನು ಬಂಧಿಸಲಾಗಿದೆ. ರಾತ್ರಿ ಬೆಂಗಳೂರಿಗೆ ವಿಮಾನದ ಮೂಲಕ ಕರೆತಂದು ಗುರುವಾರ ರಾಮನಗರ ಜೆಎಂಎಫ್ ಸಿ ಕೋರ್ಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಮಾಹಿತಿ ನೀಡಿದರು.