ಗಣೇಶ ಹಬ್ಬದಲ್ಲಿ ಅಹಿತಕರ ಘಟನೆ ನಡೆದರೇ ಎಸಿಪಿಗಳೇ ಹೊಣೆ: ಡಿಸಿಎಂ
ಗಣೇಶ ಹಬ್ಬಕ್ಕೆ ಈಗಾಗಲೇ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲ ರೀತಿಯ ಸಿದ್ಧತೆ ನಡೆಸಿದೆ.
ಬೆಂಗಳೂರು: ಗಣೇಶ ಹಬ್ಬದ ಸಂದರ್ಭದಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಅದಕ್ಕೆ ಆಯಾ ವಲಯದ ಡಿಸಿಪಿ ಹಾಗೂ ಎಸಿಪಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸಹಾಯಕ ಪೊಲೀಸ್ ಆಯುಕ್ತರು ಮತ್ತು ಮೇಲ್ಮಟ್ಟ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಗಣೇಶ ಹಬ್ಬಕ್ಕೆ ಈಗಾಗಲೇ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲ ರೀತಿಯ ಸಿದ್ಧತೆ ನಡೆಸಿದೆ.
ನಗರದಲ್ಲಿ ಎಸಿಪಿಗಳು ಕಡ್ಡಾಯವಾಗಿ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಬೇಕು. ಅಲ್ಲದೆ, ಕಡ್ಡಾಯವಾಗಿ ಗಸ್ತು ಹೋಗುವಂತೆ ಎಸಿಪಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
* ಗೂಂಡಾಕಾಯಿದೆ ಅಡಿಯಲ್ಲಿ 14 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ 3 ಪ್ರಕರಣ ಡ್ರಗ್ ಮಾರಾಟಗಾರರ ಮೇಲೆ ಹಾಕಲಾಗಿದೆ. ಅದೇ ರೀತಿ ಸರಗಳ್ಳರ ಮೇಲೂ ಗೂಂಡಾಕಾಯಿದೆ ಪ್ರಯೋಗಿಸಲಾಗಿದೆ ಎಂದು ಮಾಹಿತಿ ನೀಡಿದರು.
* ಕಳೆದ ವಿಧಾನಸಭಾ ಚುನಾವಣೆಯಲ್ಲಿ ೩೧.೮೭ ಕೋಟಿ ರು. ಹಣ, ಚಿನ್ನ ವಶಕ್ಕೆ ಪಡೆಯಲಾಗಿದೆ. ನಗರದಲ್ಲಿ ಅಪರಾಧ ಪ್ರಕರಣಗಳು ಕೂಡ ಸಾಕಷ್ಟು ಇಳಿಕೆಯಾಗಿವೆ ಎಂದರು.
* ಈ ಸಾಲಿನಲ್ಲಿ 151 ಗಾಂಜಾ ಕೇಸ್‌ಗಳು ದಾಖಲಾಗಿದ್ದು, 591 ಕೆಜಿ ಗಾಂಜಾ, ಕೊಕೇನ್ ವಶಕ್ಕೆ ಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ 298 ಜನರನ್ನು ಬಂಧಿಸಿದ್ದೇವೆ . ಈ ಪೈಕಿ 28 ವಿದೇಶಿಗರು ಇದ್ದಾರೆ ಎಂದರು. ಇನ್ನು, ವೀಸಾ ಅವಧಿ ಮುಗಿದರೂ ನಗರದಲ್ಲೇ ಇರುವ 107 ವಿದೇಶಿಗರ ವಿರುದ್ಧ ಪ್ರಕರಣ ದಾಖಲಿಸಿದ್ದು, ಶೀಘ್ರವೆ ಅವರನ್ನು ಅವರ ದೇಶಕ್ಕೆ ಕಳುಹಿಸಿಕೊಡಲಾಗುವುದು ಎಂದರು.
* ಟ್ರಾಫಿಕ್‌ನಲ್ಲಿ 54, 86,854 ಪ್ರಕರಣ ದಾಖಲಾಗಿದ್ದು, 55 ಕೋಟಿ ರೂ. ದಂಡ ಸಂಗ್ರಹಿಸಿದ್ದೇವೆ. ಟ್ರಾಫಿಕ್ ನಿರ್ವಹಣೆಗಾಗಿ ಹೊಸದಾಗಿ ಅಡಾಪ್ಟಿವ್ ಸಿಗ್ನಲ್ ಕ್ಯಾಮರಾ ಅಳವಡಿಕೆ, ಟ್ರಾಫಿಕ್ ಪೊಲೀಸರಿಗೆ ಬಾಡಿ ಕ್ಯಾಮರಾ ನೀಡಲಾಗುವುದು ಎಂದು ಮಾಹಿತಿ ನೀಡಿದರು.
* ಪೊಲೀಸ್ ಕಾನ್ಸ್‌ಟೇಬಲ್‌ಗಳ ಸಮಸ್ಯೆ ಆಲಿಸಲು ತಿಂಗಳಲ್ಲಿ ಕನಿಷ್ಠ 2 ವಾರ ಪೆರೇಡ್ ನಡೆಸಬೇಕೆಂದೂ ಸೂಚನೆ ನೀಡಿರುವುದಾಗಿ ಹೇಳಿದರು. ಅಲ್ಲದೆ, ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಲೇ ಇದೆ ಎಂದು ಪರಮೇಶ್ವರ್ ತಿಳಿಸಿದರು.