ಮೈಸೂರು: ನಗರದ ಹೆಬ್ಬಾಳು ರಿಂಗ್ ರಸ್ತೆಯಲ್ಲಿ ನಡೆದ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ನಟ ದೇವರಾಜ್ ಮತ್ತು ಅವರ ಪುತ್ರ ಪ್ರಜ್ವಲ್ ದೇವರಾಜ್ ಮಂಗಳವಾರ ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. 


COMMERCIAL BREAK
SCROLL TO CONTINUE READING

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟ ದೇವರಾಜ್, ನನ್ನ ಹುಟ್ಟು ಹಬ್ಬದ ಪ್ರಯುಕ್ತ ಸ್ನೇಹಿತರೊಬ್ಬರು ಊಟಕ್ಕೆ ಮನೆಗೆ ಕರೆದಿದ್ದರು. ಅದಕ್ಕಾಗಿ ಹೋಗಿದ್ದೆವು. ಅಲ್ಲಿಂದ ಹಿಂದಿರುಗುವಾಗ ಅಪಘಾತವಾಯಿತು. ಅದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲ. ಕಾರು ಚಾಲನೆ ಮಾಡುತ್ತಿದ್ದವರು ಸೇರಿದಂತೆ ಎಲ್ಲರೂ ಸೇಫ್‌ ಆಗಿದ್ದೇವೆ. ಕೈ ಬೆರಳು ಹೊರತುಪಡಿಸಿ ಬೇರಾವುದೇ ಗಾಯವಾಗಿಲ್ಲ. 10 ದಿನಗಳ ವಿಶ್ರಾಂತಿ ಪಡೆಯಲು ವೈದ್ಯರು ಹೇಳಿದ್ದಾರೆ. ನಂತರ ಎಂದಿನಂತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದರು.


ಸೋಮವಾರ ಬೆಳಿಗ್ಗೆ ಮೈಸೂರಿನಿಂದ ಬೆಂಗಳೂರಿಗೆ ಹಿಂತಿರುಗುತ್ತಿದ್ದ ವೇಳೆ, ಮೈಸೂರಿನ ಹೊರವಲಯದ ರಿಂಗ್ ರಸ್ತೆಯಲ್ಲಿ ದರ್ಶನ್, ದೇವರಾಜ್ ಮತ್ತು ಪ್ರಜ್ವಲ್ ಇದ್ದ ಕಾರು ಅಪಘಾತಕ್ಕೀಡಾಗಿತ್ತು. ಈ ಘಟನೆಯಲ್ಲಿ ದೇವರಾಜ್ ಮತ್ತು ಪ್ರಜ್ವಲ್ ಅವರ ಬೆರಳಿಗೆ ಏಟಾಗಿತ್ತು. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಲಗೈ ಮೂಳೆ ಮುರಿದಿದ್ದರಿಂದ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.


ನಟ ದರ್ಶನ್ ಅವರನ್ನು ನೋಡಲು ಅಭಿಮಾನಿಗಳ ದಂಡೇ ಆಸ್ಪತ್ರೆ ಬಳಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ  ಆಸ್ಪತ್ರೆ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.