ಶಿವಮೊಗ್ಗ: ರಸ್ತೆ ದುರಸ್ತಿ ಕಾಮಗಾರಿ ಕಾರಣದಿಂದಾಗಿ ಮಾರ್ಚ್ 1 ರಿಂದ 31ರವರೆಗೆ ಆಗುಂಬೆ ಘಾಟ್'ನಲ್ಲಿ ರಸ್ತೆ ಸಂಚಾರ ಬಂದ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ದಯಾನಂದ್ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಕಳೆದ ವರ್ಷ ಸುರಿದ ಭಾರೀ ಮಳೆಯಿಂದಾಗಿ ಹಾಗೂ ಭೂ ಕುಸಿತದಿಂದಾಗಿ ಆಗುಂಬೆ ಘಾಟ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿತ್ತು. ಹೀಗಾಗಿ ರಸ್ತೆ ಕಾಮಗಾರಿ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ.


ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಜಿಲ್ಲಾಡಳಿತ, ಮಾರ್ಚ್ 1 ರಿಂದ ಮಾರ್ಚ್ 31ರವರೆಗೆ ಆಗುಂಬೆ ಘಾಟ್ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗುವುದು. ಇದಕ್ಕೆ ಪರ್ಯಾಯ ಮಾರ್ಗವನ್ನು ವ್ಯವಸ್ಥೆಗೊಳಿಸಲಾಗಿದೆ ಎಂದು ತಿಳಿಸಿದೆ. 


ಲಘು ವಾಹನಗಳು, ಸಾಮಾನ್ಯ ಬಸ್ಸು, ಜೀಪು, ವ್ಯಾನ್, ಎಲ್​ಸಿವಿ (ಮಿನಿ ವ್ಯಾನ್), ದ್ವಿಚಕ್ರ ವಾಹನಗಳು ತೀರ್ಥಹಳ್ಳಿ-ಕೊಪ್ಪ-ಶೃಂಗೇರಿ-ಮಾಳಾಘಾಟ್-ಕಾರ್ಕಳ-ಉಡುಪಿ (ರಾಷ್ಟ್ರೀಯ ಹೆದ್ದಾರಿ 169) ಮೂಲಕ ಸಂಚಾರ ನಡೆಸಲಿವೆ. ಇನ್ನು ಭಾರೀ ವಾಹನಗಳು, ರಾಜಹಂಸ, ಐರಾವತ ಮತ್ತು ಖಾಸಗಿ ಲಕ್ಸುರಿ ಬಸ್​ಗಳು, ಬುಲೆಟ್ ಟ್ಯಾಂಕರ್ಸ್, ಶಿಪ್ ಕಾಗೋ ಕಂಟೈನರ್ಸ್ ಮತ್ತು ಲಾಂಗ್ ಚಾಸೀಸ್ ವಾಹನಗಳಿಗೆ ತೀರ್ಥಹಳ್ಳಿ-ಮಾಸ್ತಿಕಟ್ಟೆ- ಹೊಸಂಗಡಿ- ಸಿದ್ದಾಪುರ-ಕುಂದಾಪುರ-ಉಡುಪಿ (ರಾಜ್ಯ ಹೆದ್ದಾರಿ 52) ಮೂಲಕ ಸಂಚಾರ ನಡೆಸಲಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.