ವಿಶ್ವಾಸಮತ ಯಾಚನೆ: ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ ಐವರು ಅನರ್ಹ ಶಾಸಕರು
ಅನರ್ಹಗೊಂಡ ಬಂಡಾಯ ಶಾಸಕರಾದ ಮುನಿರತ್ನಂ, ಬೈರತಿ ಬಸವರಾಜ್, ಎಂಟಿಬಿ ನಾಗರಾಜ್, ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರು ಬಿಗಿ ಭದ್ರತೆ ನಡುವೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಬೆಂಗಳೂರು: ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅನರ್ಹಗೊಂಡ ಐವರು ಕಾಂಗ್ರೆಸ್ ಶಾಸಕರು ಸೋಮವಾರ ಮುಂಜಾನೆ ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ.
ಅನರ್ಹಗೊಂಡ ಬಂಡಾಯ ಶಾಸಕರಾದ ಮುನಿರತ್ನಂ, ಬೈರತಿ ಬಸವರಾಜ್, ಎಂಟಿಬಿ ನಾಗರಾಜ್, ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರು ಬಿಗಿ ಭದ್ರತೆ ನಡುವೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ವಿರೋಧಿಸಿ ರಾಜೀನಾಮೆ ನೀಡಿದ ಬಳಿಕ ಅವರು ಮುಂಬೈನಲ್ಲಿ ತಂಗಿದ್ದರು. ಬಳಿಕ ಅವರ ರಾಜೀನಾಮೆಗಳ ವಿಚಾರಣೆ ನಡೆಸಿದ್ದ ವಿಧಾನಸಭೆ ಸ್ಪೀಕರ್ ಆರ್.ರಮೇಶ್ ಕುಮಾರ್ ಅವರು ಜುಲೈ 25ರಂದು ಮೂವರನ್ನು ಮತ್ತು ಜುಲೈ 28ರಂದು 14 ಬಂಡಾಯ ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು.
ಅಲ್ಲಿಗೆ, ರಾಜೀನಾಮೆ ನೀಡಿದ್ದ ಒಟ್ಟು 17 ಶಾಸಕರನ್ನೂ ಸ್ಪೀಕರ್ ರಮೇಶ್ ಕುಮಾರ್ ಅವರು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಅನರ್ಹಗೊಂಡ ಶಾಸಕರು ಮುಂದಿನ 3 ವರ್ಷ 10 ತಿಂಗಳವರೆಗೆ ಯಾವುದೇ ಚುನಾವಣೆಯಲ್ಲಿ ಭಾಗವಹಿಸುವಂತಿಲ್ಲ.