ಮಾರ್ಚ್ 18ರಂದು ಸೋಲಿಲ್ಲದ ಸರದಾರ `ಖರ್ಗೆ` ಕೋಟೆಯಲ್ಲಿ ರಾಹುಲ್!
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಕಲಬುರಗಿ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋಲಿಲ್ಲದ ಸರದಾರ ಎಂದೇ ಕರೆಯಲಾಗುವ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ಶತಾಯಗತಾಯ ಮಣಿಸಲೇಬೇಕೆಂದು ಕಮಲ ಪಡೆ ಕಸರತ್ತು ನಡೆಸುತ್ತಿದೆ. ಸೋಲಿಲ್ಲದ ಸರದಾರನನ್ನು ಕಟ್ಟಿಹಾಕಲು ಬಿಜೆಪಿ ತಂತ್ರ ರೂಪಿಸುತ್ತಿದ್ದರೆ, ಅದಕ್ಕೆ ಪ್ರತಿತಂತರ ಎಣೆಯಲು ಕೈ ಪಾಳಯವೂ ಸಜ್ಜಾಗಿದೆ.
ಮಾರ್ಚ್ 6 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಸಿಲ ನಾಡಿನಲ್ಲಿ ಕಮಲ ಅರಳಿಸುವ ಪಣದೊಂದಿಗೆ ಬಿಜೆಪಿ ಬೃಹತ್ ರ‍್ಯಾಲಿಯಲ್ಲಿ ರಣಕಹಳೆ ಮೊಳಗಿಸಿದ ಬೆನ್ನಲ್ಲೇ, ಮಾರ್ಚ್ 18ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಒಂದೆಡೆ ಖರ್ಗೆಯವರನ್ನು ಸೋಲಿಸಲು ಕಮಲ ನಾಯಕರು ರಣತಂತ್ರ ರೂಪಿಸುತ್ತಿದ್ದಾರೆ, ಕಾಂಗ್ರೆಸ್ ಪಕ್ಷದ ಉಮೇಶ್ ಜಾದವ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿ ಅವಕಾಶ ನೀಡಿದರೆ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಎದುರೇ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ v/s ನರೇಂದ್ರ ಮೋದಿ, ಮಲ್ಲಿಕಾರ್ಜುನ ಖರ್ಗೆ v/s ಉಮೇಶ್ ಜಾಧವ್ ನಡುವೆ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ.
ಮಾರ್ಚ್ 6 ರಂದು ಕಲಬುರಗಿಗೆ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕಲಬುರಗಿಗೆ ಬಂದಿದ್ದಕ್ಕೆ ಅತ್ಯಂತ ಸಂತೋಷವಾಗಿದೆ. ಇದು ಪರಿಶ್ರಮ ಮತ್ತು ಸೇವೆ ಪ್ರತೀಕವಾಗಿದೆ. ಕಲಬುರ್ಗಿಯ ಆರಾಧ್ಯ ದೇವತೆಗಳಾದ ಭಗವಾನ್ ಶರಣ ಬಸವೇಶ್ವರ, ಹನುಮಾನ್ ಗೆ ನಮನ ಸಲ್ಲಿಸಿದರಲ್ಲದೆ, ಜನಸಂಘ ಆರ್ ಎಸ್ ಎಸ್ ಗೆ ಕಲಬುರಗಿ ನಿಷ್ಠಾವಂತ ಕಾರ್ಯಕರ್ತರನ್ನು ಕೊಟ್ಟಿದೆ ಎಂದು ಸ್ಮರಿಸಿದ್ದರಲ್ಲದೆ, ಕರ್ನಾತಕದಲ್ಲಿರುವುದು ರಿಮೋಟ್ ಕಂಟ್ರೋಲ್ ಸರ್ಕಾರ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದರು.
ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಕೊಟ್ಟಿದೆ. ಕಲಬುರಗಿ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಪೂರ್ಣಗೊಳಿಸಿದ್ದು ನಾವು. ಹಲವು ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ನಮ್ಮ ಸರ್ಕಾರ ಜಾರಿಗೊಳಿಸಿದ್ದು, ದಶಕಗಳ ನಿರೀಕ್ಷೆಯ ಬಳಿಕ ಬೀದರ್-ಕಲಬುರಗಿ ರೈಲ್ವೇ ಮಾರ್ಗವನ್ನು ನಮ್ಮ ಸರ್ಕಾರ ಜನತೆಗೆ ಸಮರ್ಪಿಸಿದೆ ಎಂದು ಹೇಳಿದರು.
ಒಟ್ಟಿನಲ್ಲಿ ಹಲವು ಕಾರಣಗಳಿಂದ ಈ ಬಾರಿಯ ಕಲಬುರಗಿ ಲೋಕಸಭಾ ಕ್ಷೇತ್ರ ತೀವ್ರ ಕುತೂಹಲ ಕೆರಳಿಸಿದ್ದು, ಎಲ್ಲದಕ್ಕೂ ಮೇ 23ರಂದು ಉತ್ತರ ದೊರೆಯಲಿದೆ.