ಬೆಂಗಳೂರು: ಆಲಮಟ್ಟಿ ಜಲಾಶಯದ ಪ್ರಸ್ತುತವಿರುವ ಎತ್ತರ 519 ಮೀ. ದಿಂದ 524 ಮೀ. ಹೆಚ್ಚಳ ಕುರಿತಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲಿ ಅಧಿಸೂಚನೆ ಪ್ರಕಟವಾಗುವ ನಿರೀಕ್ಷೆಯಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.


COMMERCIAL BREAK
SCROLL TO CONTINUE READING

ಗುರುವಾರ ಜಿಲ್ಲೆಯ ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜ್ ಪರಿವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆಣೆಕಟ್ಟು ಹೆಚ್ಚಳ ಕುರಿತಂತೆ ಕೇಂದ್ರ ಸರ್ಕಾರವೇ ಮಧ್ಯ ಪ್ರವೇಶಿಸಬೇಕೆಂದು ಕೋರಲಾಗಿದೆ ಎಂದರು.


ಮಹದಾಯಿ ಯೋಜನೆ ಅನುಷ್ಠಾನಕ್ಕೆ 800 ಕೋಟಿ ರೂ. ಮೊತ್ತದ ವಿಸ್ತತ ಯೋಜನಾ ವರದಿ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ. ಕೊರೋನಾ ಹಾವಳಿ ಕಡಿಮೆಯಾದ ನಂತರ ತಾವು ದೆಹಲಿಗೆ ಹೋಗಿ ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಇದರ ಅನುಮೋದನೆ ಪಡೆಯಲಾಗುವುದು ಎಂದರು.


ಕಳೆದ ಫೆಬ್ರವರಿ 6 ರಂದು ಜಲಸಂಪನ್ಮೂಲ ಸಚಿವನಾಗಿ ಅಧಿಕಾರ ಸ್ವೀಕರಿಸಿದ ಮೇಲೆ ವಿಧಾನಮಂಡಲ ಅಧಿವೇಶನ, ತದನಂತರ ಕೊರೋನಾ ಲಾಕ್‍ಡೌನ್ ಪರಿಣಾಮ ರಾಜ್ಯದಾದ್ಯಂತ ಪ್ರವಾಸ ಮಾಡಲು ಸಾಧ್ಯವಾಗಲಿಲ್ಲ. ಇದೀಗ ಜಿಲ್ಲಾವಾರು ಪ್ರವಾಸ ಆರಂಭಿಸಿದ್ದು, ನೀರಾವರಿ ಯೋಜನೆಗಳ ಸಮಗ್ರ ಮಾಹಿತಿ ಪಡೆಯುತ್ತಿದ್ದೇನೆ. ಕಲಬುರಗಿ ವಲಯದ ಎಲ್ಲಾ ನೀರಾವರಿ ಯೋಜನೆಗಳನ್ನು ಹಂತ-ಹಂತವಾಗಿ ಅನುಷ್ಟಾನಗೊಳಿಸಲಾಗುವುದು ಎಂದು ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.


ಜುಲೈ 15ರ ನಂತರ ಅಧಿಕಾರಿಗಳ ಸಭೆ: ಮುಂದಿನ 3 ವರ್ಷಗಳಲ್ಲಿ ರಾಜ್ಯದ ಆಣೆಕಟ್ಟುಗಳ ನಿರ್ವಹಣೆ, ಏತ ನೀರಾವರಿ ಯೋಜನೆ ಅನುಷ್ಠಾನ ಮತ್ತು ನೀರಾವರಿ ಯೋಜನೆಗಳಿಗೆ ಅಧುನಿಕ ಸ್ಪರ್ಶ ನೀಡಲು ಹಾಗೂ ಮುಂದೆ ಹಾಕಿಕೊಳ್ಳಬೇಕಾದ ಯೋಜನೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲು ಜುಲೈ 15ರ ನಂತರ ಅಧಿಕಾರಿಗಳ ಸಭೆ ನಡೆಸಿ ರೂಪುರೇಷೆ ಸಿದ್ದಪಡಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.


ಮಹಾರಾಷ್ಟ ಸಿ.ಎಂ.ನೊಂದಿಗೆ ಚರ್ಚೆ: ಅಂತರ ರಾಜ್ಯ ಕುಡಿಯುವ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಮುಂದಿನ ವಾರದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವರೊಂದಿಗೆ ಸಭೆ ನಡೆಸಲಾಗುತ್ತಿದ್ದು, ಇನ್ನೂ ದಿನಾಂಕ ನಿಗದಿಯಾಗಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವರು ಉತ್ತರಿಸಿದರು.


ಕಲಬುರಗಿ ನೀರಾವರಿ ವಲಯದ ಮುಖ್ಯ ಅಭಿಯಂತ ರಂಗನಾಥ ನಾಯಕ್ ಅವರು ಸೊನ್ನ ಬ್ಯಾರೇಜಿನ ಒಳ ಹರಿವು, ಹೊರ ಹರಿವು, ಸಾಮಥ್ರ್ಯ ಸೇರಿದಂತೆ ವಲಯದ ವ್ಯಾಪ್ತಿಗೆ ಬರುವ ಪ್ರದೇಶಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಸಚಿವರಿಗೆ ವಿವರಿಸಿದರು.


ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಾಲಾಜಿ, ಸಂಸದ ಡಾ.ಉಮೇಶ ಜಾಧವ, ಶಾಸಕರಾದ ರಾಜುಗೌಡ, ಮಹೇಶ ಕುಮಠಳ್ಳಿ, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ, ಜಿಲ್ಲಾ ಪಂಚಾಯತ್ ಸದಸ್ಯ ಶಿವರಾಜ ಪಾಟೀಲ ರದ್ದೆವಾಡಗಿ, ಕರ್ನಾಟಕ ನೀರಾವರಿ ನಿಗಮ ನಿಯಮಿತದ ಅಧೀಕ್ಷಕ ಅಭಿಯಂತ ಜಗನ್ನಾಥ ಹಾಲಿಂಗೆ, ಕಾರ್ಯನಿರ್ವಾಹಕ ಅಭಿಯಂತ ಅಶೋಕ ಕಲಾಲ್, ಬಿ.ಎಲ್.ಐ.ಎಸ್. ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ದಿಲೀಪ್ ಜಾಧವ ಇದ್ದರು.


ಬಳೂಂಡಗಿ ಮತ್ತು ಬೋರಿ ಏತ ನೀರಾವರಿ ಯೋಜನೆಗೂ ಭೇಟಿ: ಸಚಿವ ರಮೇಶ ಜಾರಕಿಹೊಳಿ ಅವರು ತದನಂತರ ಬಳೂಂಡಗಿ ಮತ್ತು ಬೋರಿ ಏತ ನೀರಾವರಿ ಯೋಜನೆಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.