`9 ಸಾವಿರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎನ್ನುವುದೆಲ್ಲ ಆಧಾರರಹಿತ`
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ರಾಜ್ಯದಲ್ಲಿ 8 ಸಾವಿರ ವೈದ್ಯಕೀಯ ಸೀಟುಗಳು ಹಂಚಿಕೆಗೆ ಲಭ್ಯವಿದ್ದು, ಈ ಪೈಕಿ ಈಗಾಗಲೇ 6 ಸಾವಿರ ಸೀಟುಗಳ ಹಂಚಿಕೆ ಮುಗಿದಿದೆ.
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ರಾಜ್ಯದಲ್ಲಿ 8 ಸಾವಿರ ವೈದ್ಯಕೀಯ ಸೀಟುಗಳು ಹಂಚಿಕೆಗೆ ಲಭ್ಯವಿದ್ದು, ಈ ಪೈಕಿ ಈಗಾಗಲೇ 6 ಸಾವಿರ ಸೀಟುಗಳ ಹಂಚಿಕೆ ಮುಗಿದಿದೆ. ಈ ಅಭ್ಯರ್ಥಿಗಳೆಲ್ಲ ಈಗಾಗಲೇ ಪ್ರವೇಶವನ್ನೂ ಪಡೆದುಕೊಂಡಿದ್ದಾರೆ. ಆದ್ದರಿಂದ 9 ಸಾವಿರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎನ್ನುವುದೆಲ್ಲ ಆಧಾರರಹಿತವಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಹೇಳಿದ್ದಾರೆ.
ಈ ಬಗ್ಗೆ ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, "ಎರಡನೇ ಸುತ್ತಿನ ಸೀಟು ಹಂಚಿಕೆಯ ನಂತರ ಕೇವಲ 106 ಅಭ್ಯರ್ಥಿಗಳು ಮಾತ್ರ ವೈದ್ಯಕೀಯ ಸೀಟನ್ನು ರದ್ದುಗೊಳಿಸಿದ್ದು, ಇವರಲ್ಲಿ 18 ಮಂದಿಯು ತಾವು ಮೊದಲ ಸುತ್ತಿನಲ್ಲಿ ಪಡೆದುಕೊಂಡಿದ್ದ ಎಂಜಿನಿಯರಿಂಗ್ ಸೀಟುಗಳನ್ನು ಮರಳಿ ಬಯಸಿದ್ದಾರೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ನನ್ನ ಜೀವನದಲ್ಲಿ ರೌಡಿಗಳ ಪರಿಚಯವೇ ಇಲ್ಲ, ಅದರ ಅವಶ್ಯಕತೆಯೂ ನನಗಿಲ್ಲ: ಸಚಿವರ ಸ್ಪಷ್ಟನೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿಯಮಗಳ ಪ್ರಕಾರ, ಮೊದಲ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಅದರಲ್ಲಿರುವ 'ಆಯ್ಕೆ-2'ನ್ನು ಆರಿಸಿಕೊಂಡು, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಿಭಾಗಗಳೆರಡರಲ್ಲೂ ಪಾಲ್ಗೊಳ್ಳಬಹುದು. ಆದರೆ, ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಯಾವುದೇ ಒಂದು ವಿಭಾಗದ ಸೀಟನ್ನು ಆಖೈರುಗೊಳಿಸಬೇಕಾಗುತ್ತದೆ. ಇಂತಹ ಅಭ್ಯರ್ಥಿಗಳಿಗೆ ಅಖಿಲ ಭಾರತ ಮಟ್ಟದ ಸೀಟು ಹಂಚಿಕೆಯಲ್ಲಿ ಪಾಲ್ಗೊಳ್ಳಲು ಸುಪ್ರೀಂ ಕೋರ್ಟಿನ ಆದೇಶದ ಪ್ರಕಾರ ಅವಕಾಶ ಇರುವುದಿಲ್ಲ ಎಂದು ಅವರು ವಿವರಿಸಿದ್ದಾರೆ.
ಇದನ್ನೂ ಓದಿ : ಬಿಜೆಪಿಗೆ ಕುಸ್ತಿ ಮಾಡಲು ಜನರು ಬೇಕಾಗಿದ್ದಾರೆ-ಡಿ.ಕೆ.ಶಿವಕುಮಾರ್
ಇದುವರೆಗೆ ವಿದ್ಯಾರ್ಥಿಗಳು ನೀಡಿರುವ ಆಯ್ಕೆ ಪಟ್ಟಿಯ ಅನುಸಾರವೇ ವೈದ್ಯಕೀಯ ಸೀಟುಗಳ ಹಂಚಿಕೆ ಪಾರದರ್ಶಕವಾಗಿ ನಡೆದಿದೆ. ಆದರೆ ಕೆಲವರು ಶುಲ್ಕ ದುಬಾರಿ ಎಂಬ ಕಾರಣಕ್ಕೆ ಈ ಸೀಟುಗಳನ್ನು ಹಿಂದಿರುಗಿಸಿದ್ದಾರೆ. ಇಷ್ಟರ ನಡುವೆಯೂ ಮೆರಿಟ್ ಮತ್ತು ಮೀಸಲಾತಿ ಅನ್ವಯ ಆಗಿರುವ ಸೀಟು ಹಂಚಿಕೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪಾತ್ರವೇನೂ ಇಲ್ಲ. ಜತೆಗೆ, ಎರಡನೇ ಸುತ್ತಿನಲ್ಲಿ ವೈದ್ಯಕೀಯ ಸೀಟು ಸಿಕ್ಕಿದರೆ ಅಂತಹ ಅಭ್ಯರ್ಥಿಗಳಿಗೆ ಮೊದಲ ಸುತ್ತಿನಲ್ಲಿ ಹಂಚಿಕೆಯಾಗಿದ್ದ ಎಂಜಿನಿಯರಿಂಗ್ ಸೀಟು ತನ್ನಿಂತಾನೇ ರದ್ದಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇದಲ್ಲದೆ, ಎಂಸಿಸಿ ವೇಳಾಪಟ್ಟಿಗೆ ತಕ್ಕಂತೆ ವೈದ್ಯಕೀಯ ಸೀಟುಗಳ ಹಂಚಿಕೆ ಮತ್ತು ಎಐಸಿಟಿಇ ವೇಳಾಪಟ್ಟಿಗೆ ತಕ್ಕಂತೆ ಎಂಜಿನಿಯರಿಂಗ್ ಸೀಟುಗಳ ಹಂಚಿಕೆ ಪ್ರಕ್ರಿಯೆ ನಡೆಯುತ್ತದೆ. ಇದನ್ನು ಬದಲಿಸುವ ಅಧಿಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಇಲ್ಲ. ಆದರೂ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿ, ಈ ಬಾರಿ ನ.30ರವರೆಗೂ ಕಾಲಾವಕಾಶ ಪಡೆದುಕೊಳ್ಳಲಾಗಿತ್ತು ಎಂದು ರಮ್ಯ ಸ್ಪಷ್ಟಪಡಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.