ಹಂಪಿ ಕನ್ನಡ ವಿವಿ ಮೇಲಿನ ಹಗರಣಗಳ ಆರೋಪಗಳು ಅದರ ಘನತೆಯನ್ನು ಗುಡಿಸಿ ಹಾಕುತ್ತಿವೆ-ಸಿದ್ಧರಾಮಯ್ಯ
ಇತ್ತೀಚಿನ ದಿನಗಳಲ್ಲಿ ಕನ್ನಡ ವಿಶ್ವವಿದ್ಯಾಲಯವು ಭ್ರಷ್ಟಾಚಾರ, ಕಮಿಷನ್ ದಂಧೆ ಮುಂತಾದ ಕೆಟ್ಟ ಕಾರಣಗಳಿಂದ ಸುದ್ಧಿಯಲ್ಲಿದೆ.ತೀವ್ರವಾದ ಹಗರಣಗಳ ಆರೋಪಗಳು ಈ ವಿಶ್ವವಿದ್ಯಾಲಯದ ಘನತೆಯನ್ನು ಗುಡಿಸಿ ಹಾಕುತ್ತಿವೆ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯನವರು ಹೇಳಿದ್ದಾರೆ.
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕನ್ನಡ ವಿಶ್ವವಿದ್ಯಾಲಯವು ಭ್ರಷ್ಟಾಚಾರ, ಕಮಿಷನ್ ದಂಧೆ ಮುಂತಾದ ಕೆಟ್ಟ ಕಾರಣಗಳಿಂದ ಸುದ್ಧಿಯಲ್ಲಿದೆ.ತೀವ್ರವಾದ ಹಗರಣಗಳ ಆರೋಪಗಳು ಈ ವಿಶ್ವವಿದ್ಯಾಲಯದ ಘನತೆಯನ್ನು ಗುಡಿಸಿ ಹಾಕುತ್ತಿವೆ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯನವರು ಹೇಳಿದ್ದಾರೆ.
೧೯೯೧ ರಲ್ಲಿ ಹಂಪಿಯಲ್ಲಿರುವ ‘ಕನ್ನಡ ವಿಶ್ವವಿದ್ಯಾಲಯ’ ವನ್ನು ವಿಶೇಷ ನಿಯಮಗಳನ್ನು ರೂಪಿಸಿ ಸ್ಥಾಪಿಸಲಾಗಿದೆ. ನಾಡಿನ ಎಲ್ಲ ವಿಶ್ವವಿದ್ಯಾಲಯಗಳು ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಕಲಿಸುವ ಕೆಲಸ ಮಾಡುತ್ತವೆ ಆದರೆ ಹಂಪಿಯಲ್ಲಿರುವ ಈ ವಿಶ್ವವಿದ್ಯಾಲಯವನ್ನು “ಜ್ಞಾನ ಸೃಷ್ಟಿಯ” ಕೆಲಸ ಮಾಡುವ ವಿಶಿಷ್ಟ ಉದ್ದೇಶದಿಂದ ಸ್ಥಾಪಿಸಲಾಗಿದೆ. ೧೯೯೧ ರಿಂದ ಈ ವಿಶ್ವವಿದ್ಯಾಲಯದಲ್ಲಿ ನಾಡಿನ ಅನೇಕ ಧೀಮಂತ ವಿದ್ವಾಂಸರು ಕೆಲಸ ಮಾಡಿದ್ದಾರೆ. ಹಾಗಾಗಿ ಈ ವಿ ವಿಯಲ್ಲಿ ಅತ್ಯುತ್ತಮ ಕೆಲಸವೂ ಆಗಿದೆ.
ಇದನ್ನೂ ಓದಿ : ಪ್ರಮುಖ ಪ್ರತಿಪಕ್ಷದ ಪಾತ್ರ ನಿರ್ವಹಣೆಯಲ್ಲಿ ಕಾಂಗ್ರೆಸ್ ವಿಫಲ- ಮಾಜಿ ಸಿಎಂ ಮುಕುಲ್ ಸಂಗ್ಮಾ
ವಿಜ್ಞಾನ, ತಾಂತ್ರಿಕ ಶಿಕ್ಷಣವೂ ಸೇರಿದಂತೆ ಅನೇಕ ವಿಷಯಗಳಿಗೆ ಕನ್ನಡದಲ್ಲಿ ಪಠ್ಯ ಪುಸ್ತಕಗಳನ್ನು ರೂಪಿಸುವ ಕೆಲಸವನ್ನೂ ಈ ವಿ.ವಿ ಮಾಡಿದೆ.
ಇಡೀ ದೇಶದ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯ ಗುಣಮಟ್ಟ ಕುಸಿದು ಹೋಗುತ್ತಿದೆ ಎಂಬ ಗಂಭೀರ ಆರೋಪ ವಿದ್ವತ್ ವಲಯದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಅಪವಾದವೆಂಬಂತೆ ಕನ್ನಡ ವಿಶ್ವವಿದ್ಯಾಲಯವು ಮೌಲ್ಯಯುತ ಸಂಶೋಧನಾ ಕೆಲಸಗಳನ್ನು ಮಾಡುತ್ತಿದೆ. ಆದರೆ ಹಂಪಿಯ ಕನ್ನಡ ವಿಶ್ವ ವಿದ್ಯಾಲಯವೂ ಸೇರಿದಂತೆ ನಾಡಿನ ಎಲ್ಲ ವಿಶ್ವ ವಿದ್ಯಾಲಯಗಳಲ್ಲಿ ಗುಣಮಟ್ಟದ ನೇಮಕಾತಿಗಳು ನಡೆಯದ ಕಾರಣದಿಂದ ಉತ್ತಮ ವಿದ್ವಾಂಸರುಗಳು, ಬೋಧಕರು ಲಭ್ಯವಾಗುತ್ತಿಲ್ಲ. ಉನ್ನತ ಶಿಕ್ಷಣವು ತನ್ನ ಗುಣಮಟ್ಟವನ್ನು ಕಳೆದುಕೊಂಡರೆ, ನಾಡಿನ ಸಮಸ್ತ ವಿಭಾಗಗಳೂ ಕುಸಿದು ಬೀಳುತ್ತವೆ. ಉನ್ನತ ಶಿಕ್ಷಣ ಸರಿಯಾಗಿದ್ದರೆ ಮಾತ್ರ ಉತ್ತಮ ಪ್ರಾಥಮಿಕ, ಪ್ರೌಢ ಶಿಕ್ಷಣ ಸಿಗಲು ಸಾಧ್ಯ. ಜ್ಞಾನವಂತ, ಸೂಕ್ಷ್ಮ ಮತ್ತು ಮಾನವೀಯ ಸಂವೇದನೆಯ ಸಮಾಜದ ನಿರ್ಮಾಣದಲ್ಲಿ ಉನ್ನತ ಶಿಕ್ಷಣದ ಪಾತ್ರ ಬಹಳ ದೊಡ್ಡದು.
ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ವಿಶ್ವವಿದ್ಯಾಲಯವು ಭ್ರಷ್ಟಾಚಾರ, ಕಮಿಷನ್ ದಂಧೆ ಮುಂತಾದ ಕೆಟ್ಟ ಕಾರಣಗಳಿಂದ ಸುದ್ಧಿಯಲ್ಲಿದೆ. ತೀವ್ರವಾದ ಹಗರಣಗಳ ಆರೋಪಗಳು ಈ ವಿಶ್ವವಿದ್ಯಾಲಯದ ಘನತೆಯನ್ನು ಗುಡಿಸಿ ಹಾಕುತ್ತಿವೆ.
ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಹಗರಣಗಳ ಕುರಿತು ಮಾಧ್ಯಮಗಳು ವರದಿ ಮಾಡುತ್ತಿದೆ.
ಇದನ್ನೂ ಓದಿ : ದೇಶದಲ್ಲಿ ಗಗನಕ್ಕೇರುತ್ತಿದೆ ತರಕಾರಿ ಬೆಲೆ : ಆದ್ರೆ ಇಲ್ಲಿ ಕಡಿಮೆ ಬೆಲೆಗೆ ಸಿಗುತ್ತೆ ಟೊಮೇಟೊ-ಈರುಳ್ಳಿ!
ಅದರಲ್ಲಿ ಮುಖ್ಯವಾಗಿ;
೧. ಇತ್ತೀಚೆಗೆ ವಿವಿಯಲ್ಲಿ ಕೆಲವು ಬೋಧಕ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಪತ್ರಿಕೆಗಳ ಪ್ರಕಾರ ಪ್ರತಿ ಹುದ್ದೆಗೆ ೫೦ ಲಕ್ಷ ರೂಪಾಯಿಗಳನ್ನು ನಿಗಧಿಪಡಿಸಿ, ಹರಾಜು ಮಾಡಲಾಗುತ್ತಿದೆಯೆಂದು ವರದಿ ಮಾಡಲಾಗಿದೆ. ಹಣ ಕೊಟ್ಟವರಿಗೆ ಪರೀಕ್ಷೆಗೆ ಮುನ್ನವೆ ಪ್ರಶ್ನೆ ಪತ್ರಿಕೆ ನೀಡಲಾಗುತ್ತಿದೆಯೆಂಬ ಗಂಭೀರ ಆರೋಪಗಳಿವೆಯೆಂದು ಪತ್ರಿಕೆ ವರದಿ ಮಾಡಿದೆ. ವಿಶ್ವವಿದ್ಯಾಲಯಗಳು ಹುದ್ದೆಗಳನ್ನು ಹರಾಜಿಗಿಟ್ಟರೆ ಬಡತನದ ಹಿನ್ನೆಲೆಗಳಿಂದ ಬರುವ ಪ್ರತಿಭಾವಂತರು ಆಯ್ಕೆಯಾಗಲು ಸಾಧ್ಯವೆ? ಪ್ರತಿಭಾವಂತರು ವಿವಿ ಗಳಲ್ಲಿ ಇಲ್ಲವಾದರೆ ಯಾವ ದೇಶವಾದರೂ ಉದ್ಧಾರವಾಗಲು ಸಾಧ್ಯವೆ?
೨. ಕನ್ನಡ ವಿವಿಯು ವಿವಿಧ ಹುದ್ದೆಗಳನ್ನು ತುಂಬಿಸಲು ಹೊರಡಿಸಿರುವ ಅಧಿಸೂಚನೆಯಲ್ಲಿ ಮೀಸಲಾತಿ ನಿಯಮಗಳನ್ನು ಸಂಪೂರ್ಣ ಉಲ್ಲಂಘಿಸಲಾಗಿದೆ ಎಂಬ ಆರೋಪವಿದೆ. ಜೊತೆಗೆ ಹಿಂದೆ ನೇಮಕವಾದ ಬೋಧಕ, ಬೋಧಕೇತರ ಸಿಬ್ಬಂದಿಗಳ ಪ್ರೊಬೆಷನರಿ ಅವಧಿಯನ್ನು ಘೋಷಿಸಲೂ ಸಹ ಕಮಿಷನ್ ನಿಗಧಿಗೊಳಿಸಲಾಗಿದೆ ಮತ್ತು ವಿನಾಕಾರಣ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪಗಳಿವೆ.. ಆದ್ದರಿಂದ ಕೂಡಲೆ ನೇಮಕಾತಿ ಪ್ರಕ್ರಿಯೆಯನ್ನು ನಿಲ್ಲಿಸಿ ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮವಹಿಸಬೇಕು. ರಾಜ್ಯದಲ್ಲಿರುವ ಪ್ರತಿಭಾವಂತರ ಪಟ್ಟಿಯನ್ನು ವಿಷಯವಾರು ತಯಾರಿಸಿ ಅವರುಗಳನ್ನು ಯುಜಿಸಿ ನಿಯಮಾವಳಿಗಳಂತೆ ವಿಶ್ವವಿದ್ಯಾಲಯಗಳಿಗೆ ಕರೆತರುವ ಕೆಲಸ ಮಾಡಬೇಕು.
೩. ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಬಳ ನೀಡಲು, ಪಿಂಚಣಿ ನಿಗಧಿಪಡಿಸಲು, ಪಿಂಚಣಿ ಬಿಡುಗಡೆ ಮಾಡಲೂ ಕಮಿಷನ್ ನಿಗಧಿಗೊಳಿಸಲಾಗಿದೆ, ಕಮಿಷನ್ ನೀಡದೆ ಯಾವ ಕಡತಗಳಿಗೂ ಜೀವ ಬರುವುದಿಲ್ಲವೆಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ಕುರಿತಂತೆ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರುಗಳು ವಿಶ್ವ ವಿದ್ಯಾಲಯದಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.
೪. ನಿವೃತ್ತರಾದ ಕೆಲವು ಪ್ರೊಫೆಸರುಗಳ ಪಿಂಚಣಿಯನ್ನು ನಿಗಧಿಪಡಿಸದೆ ಏಳೆಂಟು ತಿಂಗಳಿಂದ ಅವರು ಜೀವನ ನಿರ್ವವಹಿಸಲಾರದೆ ಒದ್ದಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ.
೫. ವಿಶ್ವವಿದ್ಯಾಲಯದಲ್ಲಿರುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳೂ ನೀಡುತ್ತಿದ್ದ ಪ್ರೋತ್ಸಾಹ ಧನ, ವಿದ್ಯಾರ್ಥಿ ವೇತನವನ್ನು ೨-೩ ವರ್ಷಗಳಿಂದ ನಿಲ್ಲಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಸಂಶೋಧನೆ, ಕಲಿಕೆ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ದೂರುಗಳೂ ಕೇಳಿ ಬಂದಿವೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೆ ತಜ್ಞರು ಮತ್ತು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ವಿಶ್ವವಿದ್ಯಾಲಯದ ಹಗರಣಗಳ ಕುರಿತು ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಹಾಗೂ ಈಗ ನೇಮಕಾತಿ ಮಾಡಿಕೊಳ್ಳಲು ಹೊರಟಿರುವ ಹುದ್ದೆಗಳ ವಿಚಾರದಲ್ಲಿ ಮೀಸಲಾತಿ ಉಲ್ಲಂಘನೆಯ ಆರೋಪವಿದೆ. ಈ ವಿಚಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕೋಶಗಳು ತನಿಖೆ ನಡೆಸಿ ವರದಿ ನೀಡಬೇಕು.ಅಲ್ಲಿಯವರೆಗೆ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು. ವಿಶ್ವವಿದ್ಯಾಲಯಕ್ಕೆ ಅಗತ್ಯವಾಗಿರುವ ಅನುದಾನವನ್ನು ಕೂಡಲೆ ಒದಗಿಸಿ, ಸಂಬಳ, ಪಿಂಚಣಿ, ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನ ಮತ್ತಿತರ ಸೌಲಭ್ಯಗಳಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳಬೇಕು ಹಾಗೂ ವಿಶ್ವವಿದ್ಯಾಲಯದ ಆಡಳಿತವನ್ನು ಸಂಪೂರ್ಣ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇನೆ" ಎಂದು ಸಿದ್ಧರಾಮಯ್ಯನವರು ಮನವಿ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.