ಚಿತ್ರದುರ್ಗದ ಹೊಳಲ್ಕೆರೆಯ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಅಮಿತ್ ಷಾ
ಚಿತ್ರದುರ್ಗ: ಇಂದು ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ನಡೆಯಲಿರುವ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭಾಗವಹಿಸಲಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ, ಹೊಸದುರ್ಗ ಸುತ್ತಮುತ್ತಲ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸಲಿದ್ದಾರೆ. ಈ ಸಮಾವೇಶದಲ್ಲಿ 50 ಸಾವಿರ ಕಾರ್ಯಕರ್ತರನ್ನು ಸೇರಿಸುವ ನಿರೀಕ್ಷೆ ಇದೆ.
ಬೆಳಗ್ಗೆ 11.30ಕ್ಕೆ ಬೆಂಗಳೂರಿನಿಂದ ವಿಶೇಷ ಹೆಲಿಕ್ಯಾಪ್ಟರ್ ನಲ್ಲಿ ಹೊರಡಲಿರುವ ಅಮಿತ್ ಷಾ, ಮಧ್ಯಾಹ್ನ 12ಕ್ಕೆ ಹೊಳಲ್ಕೆರೆಗೆ ಆಗಮಿಸಲಿದ್ದಾರೆ. ಬೆಳಿಗ್ಗೆ 12 ಗಂಟೆಗೆ ಬಿಜೆಪಿ ಪರಿವರ್ತನಾ ಯಾತ್ರೆ ಆರಂಭಗೊಳ್ಳಲಿದೆ. ಹೊಳಲ್ಕೆರೆ ವೃತ್ತದಿಂದ ಸರ್ಕಾರಿ ಕಾಲೇಜು ಮೈದಾನದವರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಜಾಥಾದಲ್ಲಿ ಸಾಗಲಿರುವ ಬಿಜೆಪಿ ನಾಯಕರು ಹೊಳಲ್ಕೆರೆಯಲ್ಲಿ ಅಮಿತ್ ಷಾ ಅವರನ್ನು ಸ್ವಾಗತಿಸಲಿದ್ದಾರೆ. ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಮತ್ತು ಕೇಂದ್ರ ಸಚಿವ ಅನಂತ್ ಕುಮಾರ್ ಷಾಗೆ ಸಾತ್ ನೀಡಲಿದ್ದಾರೆ.