ದಾವಣಗೆರೆ: ಲೋಕಸಭೆ ಚುನಾವಣಾ ಪ್ರಚಾರಕ್ಕೆ ಕರ್ನಾಟಕದಲ್ಲಿ ಇಂದು ತೆರೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ರಾಜ್ಯದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ದಾವಣಗೆರೆಯ ಹೊನ್ನಾಳಿ ತಾಲ್ಲೂಕಿನ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಪರ ಪ್ರಚಾರ ನಡೆಸಿದ ಅಮಿತ್ ಷಾ, ಬಹಿರಂಗ ಸಭೆಯಲ್ಲಿ ಮಹಾಘಟಬಂಧನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.


ಮಹಾಘಟಬಂಧನ್ ಗೆ ನಾಯಕ ಎಂಬುವರಿಲ್ಲ. ಒಂದು ವೇಳೆ ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ ದಿನಕ್ಕೊಬ್ಬರು ಪ್ರಧಾನಿಯಾಗುತ್ತಾರೆ. ಒಂದೆಡೆ ಎನ್​ಡಿಎ ಇದ್ದರೆ, ಮತ್ತೊಂದೆಡೆ ರಾಹುಲ್ ಅಂಡ್ ಟೀಮ್ ಇದೆ. ದೇಶವನ್ನು ಆಳುವವರು ಯಾರು ಎಂಬ ಆಯ್ಕೆ ನಿಮ್ಮ ಮುಂದಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದರು.


ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅತೀ ಕಡಿಮೆ ಸ್ಥಾನಗಳನ್ನು ಗಳಿಸಿದ ಪಕ್ಷ ಅಧಿಕಾರ ನಡೆಸುವಂತಾಯಿತು. ಆದರೆ ಬಿಜೆಪಿ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದರೂ ಸಹ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದಾಗಿ ಅತೀ ಕಡಿಮೆ ಸ್ಥಾನ ಗಳಿಸಿದ ಪಕ್ಷದ ಅಭ್ಯರ್ಥಿ ಮುಖ್ಯಮಂತ್ರಿ ಆಗಿದ್ದಾರೆ ಎಂದು ಅಮಿತ್ ಶಾ ಟೀಕಿಸಿದರು.



ರಾಜ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರು ಸೋನಿಯಾ ಮತ್ತು ರಾಹುಲ್ ಗಾಂಧಿಯಿಂದ ಮುಖ್ಯಮಂತ್ರಿ ಆಗಿದ್ದೇನೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ಅವರು ಮುಖ್ಯಮಂತ್ರಿ ಆಗುವಲ್ಲ ಜನರ ಪಾತ್ರ ಏನಿಲ್ಲವೆ? ಜನರನ್ನೇ ಮರೆತು ಮತದಾರರಿಗೆ ಅನ್ಯಾಯ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಅಭಿವೃದ್ಧಿ ಬೇಕಾಗಿಲ್ಲ. ಅಧಿಕಾರಕ್ಕೆ ಬಂದು ಎಟಿಎಂ ಮೂಲಕ ಹಣ ಗಳಿಸಲು ಕೆಲಸ ಮಾಡುತ್ತಿದೆ ಎಂದು ಅಮಿತ್ ಶಾ ಆರೋಪಿಸಿದರು.