ತಾರಾ ಪ್ರಚಾರಕರ ಪಟ್ಟಿಯಲ್ಲಿ ಅನಂತ್ ಕುಮಾರ್ ಹೆಗಡೆಗೆ ಸಿಕ್ತು ಅಗ್ರಸ್ಥಾನ: ಬಿಜೆಪಿಯಲ್ಲಿ ಮೂಡಿತು ಅಸಮಧಾನ
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 75 ಜನ ತಾರಾ ಪ್ರಚಾರಕರ ಪಟ್ಟಿಯನ್ನು ಸಿದ್ಧಪಡಿಸಿದ ಬಿಜೆಪಿ ವರಿಷ್ಠರು.
ಬೆಂಗಳೂರು: ವಿಧಾನಸಭಾ ಚುನಾವಣೆಗೆ ಅಣಿಯಾಗುತ್ತಿರುವ ಬಿಜೆಪಿ ವರಿಷ್ಠರು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 75 ಜನ ತಾರಾ ಪ್ರಚಾರಕರ ಪಟ್ಟಿಯನ್ನು ಸಿದ್ಧಪಡಿಸಿ, ರಾಜ್ಯ ಘಟಕಕ್ಕೆ ಕಳುಹಿಸಿದ್ದಾರೆ. ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನ ದೊರೆತಿದ್ದು, ಬಿಜೆಪಿಯ ರಾಜ್ಯ ಘಟಕದ ನಾಯಕರಲ್ಲಿ ಅಸಮಧಾನ ಮೂಡಿದೆ.
ಈ ಹಿಂದೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು, ಉಪಮುಖ್ಯಮಂತ್ರಿ ಹುದ್ದೆ ಹೊಂದಿದ್ದವರು, ಪಕ್ಷದ ಹಿರಿಯ ನಾಯಕರನ್ನು ಕಡೆಗಣಿಸಿ ತಾರಾ ಪ್ರಚಾರಕರ ಪಟ್ಟಿಯಲ್ಲಿ ಅನಂತ್ ಕುಮಾರ್ ಹೆಗಡೆಗೆ ಅಗ್ರಸ್ಥಾನ ನೀಡಿರುವುದು ಪಕ್ಷದ ಆಂತರಿಕ ವಲಯದಲ್ಲಿ ಬಾರಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ತಾರಾ ಪ್ರಚಾರಕರ ಪಟ್ಟಿ ಈ ಕೆಳಗಿನಂತಿದೆ...
ಪ್ರಧಾನಮಂತ್ರಿ ನರೇಂದ್ರ ಮೋದಿ(ಮೊದಲ ಸ್ಥಾನ), ಅಮಿತ್ ಷಾ (ಎರಡನೇ ಸ್ಥಾನ), ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್(ಮೂರನೇ ಸ್ಥಾನ), ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ (ನಾಲ್ಕನೇ ಸ್ಥಾನ), ಕೇಂದ್ರ ಸಚಿವ ಅನಂತ್ ಕುಮಾರ್(ಐದನೇ ಸ್ಥಾನ), ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ(ಆರನೇ ಸ್ಥಾನ), ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ(ಏಳನೇ ಸ್ಥಾನ) ಪಡೆದಿದ್ದಾರೆ.
ನಂತರದ ಸ್ಥಾನದಲ್ಲಿ ಕೇಂದ್ರ ನೀರು ಮತ್ತು ನೈರ್ಮಲ್ಯ ಖಾತೆ ಸಚಿವ ರಮೇಶ್ ಜಿಗಜಿಣಗಿ, ರಾಜ್ಯದ ಮನೆಮಗಳು ಎಂದೇ ಬಿಂಬಿತವಾಗುವ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯ ವಿರೋಧ ಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ ಇದ್ದಾರೆ. ಸಚಿವರಾಗುವವರೆಗೂ ಪಕ್ಷದ ಚಟುವಟಿಕೆಗಳಿಂದ ಬಹುತೇಕ ದೂರವಿದ್ದ ಹೆಗಡೆಯವರಿಗೆ ಕೇವಲ ಹಿಂದೂಗಳ ಮತ ಕ್ರೋಡೀಕರಣದ ದೃಷ್ಟಿಯಿಂದ ಆರನೇ ಸ್ಥಾನಕ್ಕೆ ಬಡ್ತಿ ನೀಡಿರುವುದು ಪಕ್ಷದಲ್ಲಿ ಅಸಮಧಾನ ಮೂಡಲು ಕಾರಣ ಎಂದು ಪ್ರಮುಖರು ತಮ್ಮ ಅತೃಪ್ತಿಯನ್ನು ಹೊರಹಾಕಿದ್ದಾರೆ.