ಬೆಂಗಳೂರು: ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಒಂದೇ ಕುಟುಂಬದ ನಾಲ್ವರು ಸೇರಿ ಒಟ್ಟು ಏಳು ಮಂದಿ ಮಣ್ಣಿನಡಿ ಸಿಲುಕಿ ಮೃತಪಟ್ಟಿರುವ ಸಾಧ್ಯತೆಯಿದೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆಯುತ್ತಿದ್ದು, ಮೃತಪಟ್ಟವರಿಗೆ ಕೂಡಲೇ 5 ಲಕ್ಷ ರೂ. ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಂಗಳವಾರ ಸದನಕ್ಕೆ ಮಾಹಿತಿ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಮಂಗಳವಾರ ವಿಧಾನಸಭಾ ಅಧಿವೇಶನದಲ್ಲಿ ಅಂಕೋಲ ಅಪಘಾತದ ಬಗ್ಗೆ ಮಾಹಿತಿ ನೀಡಿದ ಅವರು, ʼನದಿ ಹಾಗೂ ಗುಡ್ಡದ ನಡುವೆ ರಾಷ್ಟ್ರೀಯ ಹೆದ್ದಾರಿ ಇದ್ದು, ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಕೆಲವರು ಸಣ್ಣಮಟ್ಟದ ಕ್ಯಾಂಟೀನ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. ಇಲ್ಲಿ ಅಡುಗೆ ಅನಿಲ ಹೊತ್ತೊಯ್ಯುವ ಟ್ಯಾಂಕರ್‌ ಚಾಲಕರು ಟೀ ಕುಡಿಯಲು ವಾಹನ ನಿಲ್ಲಿಸಿದ್ದಾಗ ಅವಘಡ ಸಂಭವಿಸಿದೆ ಎಂದು ಹೇಳಿದರು.


ಇದನ್ನೂ ಓದಿ: ಗುಡ್ಡ ಕುಸಿತ: ಆಸರೆಯಾಗಿದ್ದ ಹೊಟೇಲ್ ಜೊತೆಯಲ್ಲೇ ಜೀವನದ ಅಂತ್ಯ ಕಂಡ ಕುಟುಂಬ


ಗುಡ್ಡ ಕುಸಿದು ಟ್ಯಾಂಕರ್‌ ಲಾರಿ ಹಾಗೂ ಕ್ಯಾಂಟೀನ್‌ ನದಿಗೆ ಕೊಚ್ಚಿ ಹೋಗಿದೆ. ಪರಿಣಾಮ ಕ್ಯಾಂಟೀನ್‌ ನಡೆಸುತ್ತಿದ್ದ ಒಂದೇ ಕುಟುಂಬದ ನಾಲ್ವರು, ಟ್ಯಾಂಕರ್‌ ಚಾಲಕರು ಸೇರಿ ಒಟ್ಟು 7 ಜನ ಮೃತಪಟ್ಟಿರುವ ಶಂಕೆ ಇದೆ. ಮೃತರನ್ನು ಲಕ್ಷ್ಮಣ ನಾಯ್ಕ್ (47), ಶಾಂತಿ ನಾಯ್ಕ್ (36), ರೋಶನ್ (11), ಅವಾಂತಿಕಾ (6), ಜಗನ್ನಾಥ (55) ಎಂದು ಗುರುತಿಸಲಾಗಿದೆ. ಅಲ್ಲದೆ ರಕ್ಷಣಾ ಕಾರ್ಯಾಚರಣೆಯ ವೇಳೆ ಶಾಂತಿ ನಾಯ್ಕ್ ಎಂಬ ಮಹಿಳೆಯ ಮೃತ ದೇಹವನ್ನು ಪತ್ತೆ ಮಾಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಸದನಕ್ಕೆ ಮಾಹಿತಿ ನೀಡಿದರು.


ರಕ್ಷಣಾ ಕಾರ್ಯಾಚರಣೆ ಮುಂದುವರೆಯುತ್ತಿದ್ದು, ಅಗ್ನಿಶಾಮಕ ದಳ ಹಾಗೂ NDRF ತುಕಡಿಯನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರೂ ಸ್ಥಳಕ್ಕೆ ಧಾವಿಸಿದ್ದಾರೆ. ಭಾರತೀಯ ಪೆಟ್ರೋಲಿಯಂ ಲಿಮಿಟೆಡ್‌ನ ಅಧಿಕಾರಿಗಳೂ ಸ್ಥಳದಲ್ಲಿದ್ದು, ನೀರಿನಲ್ಲಿ ಕೊಚ್ಚಿಹೋಗಿರುವ ಸಿಲಿಂಡರ್‌ ಅನ್ನು ಸುರಕ್ಷಿತವಾಗಿ ಹೊರತೆಗೆಯುವ ಕೆಲಸವೂ ಪ್ರಗತಿಯಲ್ಲಿದೆ ಎಂದರು.


ಈ ದುರ್ಘಟನೆಯಲ್ಲಿ ಮೃತಪಟ್ಟವರಿಗೆ ಕೂಡಲೇ 5 ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಇನ್ನೂ ವಾಹನ ಚಾಲಕರು ನಮ್ಮ ರಾಜ್ಯದವರಲ್ಲ. ಆದರೂ ಅವರು ಕೆಲಸದ ಮೇಲೆ ನಮ್ಮ ರಾಜ್ಯಕ್ಕೆ ಬಂದಿದ್ದು, ಈ ವೇಳೆ ದುರಾದೃಷ್ಟವಶಾತ್‌ ಅಪಘಾತ ಸಂಭವಿಸಿದೆ. ಹೀಗಾಗಿ ಅವರಿಗೂ ಪರಿಹಾರ ನೀಡುವ ಬಗ್ಗೆ ಕ್ರಮ ಜರುಗಿಸಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು.


ಇದನ್ನೂ ಓದಿ: ಅಂಜಲಿ ಹತ್ಯೆ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಕುಟುಂಬಸ್ಥರಿಗೆ ಪರಿಹಾರ


ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆ ಮಾತುಕತೆಯ ಭರವಸೆ


ಈ ಅಪಘಾತ ನಡೆಯಲು ಕಾರಣವೇನು? ಎಂಬ ಬಗ್ಗೆಯೂ ಸದನದಲ್ಲಿ ಧ್ವನಿ ಎತ್ತಿದ ಸಚಿವ ಕೃಷ್ಣ ಬೈರೇಗೌಡ ಅವರು, “ಕಳೆದ ವರ್ಷ ಅತಿವೃಷ್ಟಿಯ ಸಂದರ್ಭದಲ್ಲೇ ನಾನು ಈ ಭಾಗಕ್ಕೆ ತೆರಳಿದ್ದೆ. ರಾಷ್ಟ್ರೀಯ ಹೆದ್ದಾರಿಗಳು ವೈಜ್ಞಾನಿಕವಾಗಿ ನಿರ್ಮಾಣವಾಗಿಲ್ಲ. ಅಲ್ಲದೆ ಕೈಗಾ ಪರಮಾಣು ವಿದ್ಯುತ್‌ ಸ್ಥಾವರದ ಕಾಲುವೆಗಳೂ ಕ್ರಮಬದ್ಧವಾಗಿಲ್ಲ. ಹೀಗಾಗಿ ಭೂ ಕುಸಿತ ಸಂಭವಿಸುವ ಬಗ್ಗೆ ಆಗಲೇ ಎಚ್ಚರಿಕೆ ನೀಡಿದ್ದೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಮ್ಮ ಮಾತಿಗೆ ಕಿವಿಕೊಡುವ ಗೋಜಿಗೇ ಹೋಗಿಲ್ಲವೆಂದು ಅವರು ಅಸಮಾಧಾನ ಹೊರಹಾಕಿದರು.


ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಮ್ಮ ಮಾತನ್ನು ಕೇಳುವುದೇ ಇಲ್ಲ. ನಾವು ಏನೇ ಹೇಳಿದರೂ, ನಮ್ಮ ಕೇಂದ್ರ ಕಚೇರಿ ದೆಹಲಿಯಲ್ಲಿದೆ, ಅಲ್ಲಿಗೆ ಪತ್ರ ಬರೆಯುತ್ತೇವೆ ಎಂದಷ್ಟೇ ಹೇಳಿ ಕೈ ತೊಳೆದುಕೊಳ್ಳುತ್ತಾರೆ. ಆದರೆ ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಇಂದೇ ಕರೆಸಿ ಘಟನೆಯ ಬಗ್ಗೆ ಮಾತನಾಡಲಾಗುವುದು. ಅಲ್ಲದೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಮೂಲಕ ಪತ್ರ ಬರೆಯಲಾಗುವುದು. ಮುಂದಿನ ದಿನಗಳಲ್ಲಿ ಇಂತಹ ಅಪಘಾತಗಳು ನಡೆಯದಂತೆ ತಡೆಯುವ ನಿಟ್ಟಿನಲ್ಲಿ ಎಲ್ಲಾ ಸೂಕ್ತ ಕ್ರಮಗಳನ್ನೂ ತೆಗೆದುಕೊಳ್ಳಲಾಗುವುದು ಎಂದು ಸದನಕ್ಕೆ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದರು.


ಇದನ್ನೂ ಓದಿ: 7th Pay Commission: ಸರ್ಕಾರಿ ನೌಕರರಿಗೆ ಬಂಪರ್, 7ನೇ ವೇತನ ಆಯೋಗದ ಶಿಫಾರಸಿಗೆ ಅನುಮೋದನೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.