ಬೆಂಗಳೂರು: ಇಲ್ಲಿನ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ  ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ಅರೋಪಿ ಕರ್ನಾಟಕ ಟಿಪ್ಪು ಟೈಗರ್ ಅಲ್ಫತ್  ಟ್ರಸ್ಟ್ ಅಧ್ಯಕ್ಷ ಕೆ. ವಾಜಿದ್ ಪಾಷ ಅವರನ್ನು ಬಂಧಿಸಲಾಗಿದೆ.


COMMERCIAL BREAK
SCROLL TO CONTINUE READING

ಕರ್ನಾಟಕ ಟಿಪ್ಪು ಟೈಗರ್ ಅಲ್ಫತ್  ಟ್ರಸ್ಟ್ ಅಧ್ಯಕ್ಷ ಕೆ. ವಾಜಿದ್ ಪಾಷ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು ಕೆಲ ದಿನಗಳ ಹಿಂದೆ 'ಶಾಸಕ ಅಖಂಡ ಶ್ರೀನಿವಾಸ್ ಕಾಣೆಯಾಗಿದ್ದಾನೆ' ಎಂದು ಪೋಸ್ಟ್ ಹಾಕಿದ್ದ. ಆಗ ಅಖಂಡ ಶ್ರೀನಿವಾಸ್ ಬೆಂಬಲಿಗರು ವಾಜಿದ್ ಪಾಷ ವಿರುದ್ದ ದೂರು ನೀಡಿದ್ದರು. ಬಳಿಕ ಪೊಲೀಸ್ ಠಾಣೆ ಯಲ್ಲಿ ರಾಜಿ ಮಾಡಿಸಿ ವಿವಾದ ಬಗೆಹರಿಸಲಾಗಿತ್ತು.


ಈಗ ಪ್ರವಾದಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಮತ್ತು ಆ ಮೂಲಕ‌ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ  ಗಲಭೆಗೆ ಕಾರಣನಾಗಿದ್ದ ನವೀನ್ ವಿರುದ್ದ  ದೂರು ನೀಡುವ ತಂಡದಲ್ಲೂ ವಾಜೀದ್ ಪಾಷಾ ಕಾಣಿಸಿಕೊಂಡಿದ್ದರು.‌ ದೂರು ನೀಡುವ ಸಮಯದಲ್ಲಿ ನವೀನ್ ಅರೆಸ್ಟ್ ಮಾಡಲು ಪೊಲೀಸರು ಎರಡು ಗಂಟೆಗಳ ಕಾಲ ಸಮಯ ಕೇಳಿದಾಗ ತಕ್ಷಣವೇ ಬಂಧಿಸುವಂತೆ ಒತ್ತಾಯಿಸಿದ್ದರು.


ಹಿಂದೆ ಅಖಂಡ ಶ್ರೀನಿವಾಸ್ ವಿರುದ್ಧ ಮತ್ತು ಈಗ ನವೀನ್ ವಿರುದ್ಧ ಕಿಡಿಕಾರುತ್ತಿದ್ದ ವಾಜಿದ್ ಗಲಭೆಯ ಹಿಂದೆ ಇರಬಹುದು ಎಂಬ ಅನುಮಾನದ ಮೇಲೆ ಬಂಧಿಸಲಾಗಿದೆ. ಡಿ.ಜೆ. ಹಳ್ಳಿ ಪೊಲೀಸ್ ಠಾಣೆ ದ್ವಂಸದ ಹಿಂದೆ ವಾಜಿದ್ ಬೆಂಬಲಿಗರು ಇರಬಹುದು ಎಂಬ ಶಂಕೆ ಕೂಡ‌ ಇದೆ. ಸದ್ಯ ವಾಜಿದ್ ಅವರನ್ನು ಸಿಸಿಬಿ ಹಾಗೂ ಡಿ‌.ಜೆ. ಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.