ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಲು ಮತ್ತೊಂದು ಸುತ್ತಿನ ಪ್ರಯತ್ನ
ಬೆಂಗಳೂರು: ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಲು ರಾಜ್ಯ ಕಾರ್ಮಿಕ ಇಲಾಖೆಯಿಂದ ಮತ್ತೊಂದು ಸುತ್ತಿನ ಪ್ರಯತ್ನ ನಡೆದಿದೆ. ಹಿಂದಿನ ವಿಧೇಯಕದಲ್ಲಿ ಕೆಲ ಬದಲಾವಣೆ ಮಾಡಲು ಇಲಾಖೆ ಯೋಜನೆ ರೂಪಿಸಿದೆ.
ರಾಜ್ಯ ಸರ್ಕಾರದ ನೆರವು ಪಡೆದಿರುವ ಕೈಗಾರಿಕೆಗಳಲ್ಲಿ ಮೀಸಲಾತಿ, ಸಬ್ಸಿಡಿ ದರದಲ್ಲಿ ಭೂಮಿ, ನೀರು, ವಿದ್ಯುತ್ ಪಡೆದ ಉದ್ಯಮದಲ್ಲಿ ಮೀಸಲಾತಿ ನೀಡುವಂತೆ ಅಡ್ವೋಕೇಟ್ ಜನರಲ್ ವರದಿಯಂತೆ ಮುಂದಿನ ಕ್ರಮಕ್ಕೆ ಚಿಂತನೆ ನದೆಸಲಾಗಿದೆ.
ಹೊಸ ವಿಧೇಯಕ ಸಚಿವ ಸಂಪುಟದಲ್ಲಿಟ್ಟು ಚರ್ಚೆ ಮಾಡಲು ತೀರ್ಮಾನಿಸಿರುವ ಇಲಾಖೆ ರಾಜ್ಯದ ಹಿತ ಕಾಪಾಡಲು ಕನ್ನಡಿಗರಿಗೆ ಮೀಸಲಾತಿ ಕೊಡಿಸಲು ಹೋರಾಟ ನಡೆಸುವ ಸಲುವಾಗಿ
ಅಡ್ವೋಕೇಟ್ ಜನರಲ್ ಸಲಹೆ ಪರಿಗಣಿಸಿ ಕಾನೂನು ಇಲಾಖೆಯ ಜೊತೆಗೂ ಸಭೆ ನಡೆಸುವುದಾಗಿ ಹೇಳಿದೆ.
ಅಧಿವೇಶನಕ್ಕೂ ಮುನ್ನವೇ ಸ್ಪಷ್ಟವಾದ ತಿರ್ಮಾನ ಮಾಡಲು ಚಿಂತನೆ ನಡೆಸಿರುವ ಇಲಾಖೆ ಮುಂದಿನ ವಾರ ಕಾನೂನು ಇಲಾಖೆಯ ಅಧಿಕಾರಿಗಳ ಜೊತೆಗೆ ಉನ್ನತಮಟ್ಟದ ಸಭೆ ಕೈಗೊಳ್ಳಲಿದೆ.
ಮೀಸಲಾತಿಯ ಅಗತ್ಯತೆಯನ್ನು ಸಭೆಯಲ್ಲಿ ಪ್ರತಿಪಾದಿಸಲಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್, ಕಾರ್ಮಿಕ ಇಲಾಖೆಯ ಕ್ರಮವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್- ಯಾವುದೇ ಕೈಗಾರಿಕೆಗಳಿಗೆ ತೊಂದರೆ ಕೊಡೋ ಉದ್ದೇಶ ನಮಗಿಲ್ಲ. ಸರ್ಕಾರದ ನೆರವು ಪಡೆದಿರುವ ಕೈಗಾರಿಕೆಗಳಲ್ಲಾದರೂ ಮೀಸಲಾತಿ ಬೇಕು. ಅದಕ್ಕಾಗಿ ಎಲ್ಲಾ ಹಂತದ ಪ್ರಯತ್ನಗಳನ್ನು ಮಾಡಲು ಮುಂದಾಗಿದ್ದೇವೆ.
ನಮ್ಮ ನಾಡಿನ ಜನರಿಗೆ ಮೀಸಲಾತಿ ಸಿಗುವಂತೆ ಮಾಡಲು ಇಲಾಖೆ ಹೋರಾಟ ನಡೆಸುತ್ತಿದೆ. ನಮ್ಮ ವಿಧೇಯಕಕ್ಕೆ ಮಹಾರಾಷ್ಟ್ರ ಸರ್ಕಾರ ಸಹಮತ ಮೆಚ್ಚುಗೆ ವ್ಯಕ್ತಪಡಿಸಿದೆ. ವಿಧೇಯಕದಲ್ಲಿನ ವಿವರಗಳನ್ನು ನೀಡುವಂತೆ ನೆರೆಯ ರಾಜ್ಯ ಮಹಾರಾಷ್ಟ್ರ ಕೇಳಿದೆ ಎಂದು ವಿವರಿಸಿದರು.
ಈ ಹಿಂದೆ ಉತ್ತಮ ವಿಧೇಯಕದ ಬಗ್ಗೆ ಕಾನೂನು ಇಲಾಖೆಯಿಂದ ಆಕ್ಷೇಪ ವ್ಯಕ್ತವಾಗಿತ್ತು. ಮೀಸಲಾತಿ ಕೊಡಿಸುವುದು ಅಸಂವಿಧಾನ ಕ್ರಮ ಎಂದೂ ಸಹ ಹೇಳಲಾಗಿದೆ. ಹೀಗಾಗಿ ಪರ್ಯಾಯ ಮಾರ್ಗಗಳನ್ನು ಹುಡುಕಿ ನಾಡಿನ ಹಿತ ಕಾಪಾಡ್ತೇವೆ ಎಂದು ಲಾಡ್ ಆಶ್ವಾಸನೆ ನೀಡಿದ್ದಾರೆ.