ಮಂಡ್ಯ: ಇಂದು ಕಾವೇರಿ ನೀರು ನಿಯಂತ್ರಣ ಮಂಡಳಿ ಸಭೆ ನಡೆಯಲಿದ್ದು, ಈ ಸಂದರ್ಭದಲ್ಲಿ ಭತ್ತದ ಬೆಳೆಗೆ ನೀರು ಹರಿಸಲು ಅನುಮತಿ ಪಡೆದುಕೊಳ್ಳುವುದಾಗಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ರೈತರಿಗೆ ಭರವಸೆ ನೀಡಿದರು.


COMMERCIAL BREAK
SCROLL TO CONTINUE READING

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇಂದು ಮಂಡ್ಯದಲ್ಲಿ ಭತ್ತ ಬೆಳೆಗೆ ನೀರು ಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಪರಮೇಶ್ವರ ಅವರು, ರೈತರನ್ನು ಮನವೊಲಿಸುವ ಯತ್ನ ಮಾಡಿದರು.


ಭತ್ತ ಬೆಳೆ ಕೈ ಸೇರುವ ಕೊನೆಯ ಹಂತದಲ್ಲಿ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಕೊನೆ ಹಂತವಾಗಿ ನೀರು ಬಿಡಬೇಕು ಎಂದು ರೈತರು ಇಂದು ಒತ್ತಾಯಿಸಿ ಪ್ರತಿಭಟಿಸುತ್ತಿದ್ದಾರೆ. ಮುಂಗಾರು ಮಳೆ 18 ದಿನ ತಡವಾಗಿ ಬಂದಿದೆ. ಕಾವೇರಿಯಲ್ಲಿ ಪ್ರಸ್ತುತ ಕೇವಲ 79.62 ಟಿಎಂಸಿ ನೀರು ಲಭ್ಯವಿದೆ. ಕುಡಿಯುವ ನೀರಿಗಾಗಿಯೇ ಕನಿಷ್ಠ 75 ಟಿಎಂಸಿ ನೀರು ಶೇಖರಿಸಿರಬೇಕು. ಮಿಕ್ಕ ನೀರನ್ನು ಭತ್ತದ ಬೆಳೆಗೆ ಹರಿಸಬೇಕು ಎಂಬುದು ಅವರ ಒತ್ತಾಯವಾಗಿದೆ.


ಮಂಗಳವಾರ ಕಾವೇರಿ ನಿರ್ವಹಣಾ ಮಂಡಳಿಯ ಸಭೆಯನ್ನು ಕರೆಯಲಾಗಿದೆ. ನಮ್ಮ ರಾಜ್ಯದಿಂದ ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಭಾಗಿಯಾಗಲಿದ್ದಾರೆ. ತಮಿಳುನಾಡಿನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಅವರಿಗೂ ಸಹ ಭತ್ತದ ಬೆಳೆಗೆ ನೀರು ಬಿಡಬೇಕು ಎಂಬ ಬೇಡಿಕೆ ಇದೆ. ನಮ್ಮ ರಾಜ್ಯದ ರೈತರ ಈ ಸಮಸ್ಯೆಯನ್ನು ಮಂಡಳಿ ಮುಂದಿಡುವಂತೆ ಅಧಿಕಾರಿಗೆ ತಿಳಿಸಿದ್ದೇವೆ. ನೀರು ಬಿಡುವ ಸಂಬಂಧ ಮಂಡಳಿಯ ಅನುಮತಿ ಪಡೆದುಕೊಳ್ಳುವುದು ಅನಿವಾರ್ಯ. ಹೀಗಾಗಿ ಸಭೆಗೆ ರೈತರ ಸಮಸ್ಯೆ ಮುಟ್ಟಿಸಿ ನೀರು ಹರಿಸಲು ಅನುಮತಿ ಪಡೆದುಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಪರಮೇಶ್ವರ ಹೇಳಿದರು.