ಬೆಂಗಳೂರು: ಕೇಂದ್ರ ಸರ್ಕಾರದ ಅನ್ನ ಯೋಜನೆಯಡಿ ಏಪ್ರಿಲ್ ಮತ್ತು ಮೇ ತಿಂಗಳ ಪಡಿತರ ವಿತರಣೆ ನಾಳೆಯಿಂದ ಆರಂಭವಾಗಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ  ಕೆ. ಗೋಪಾಲಯ್ಯ (K Gopalaiah)  ತಿಳಿಸಿದರು.


COMMERCIAL BREAK
SCROLL TO CONTINUE READING

ವಿಕಾಸಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಅಂತ್ಯೋದಯ ಮತ್ತು   ಬಿಪಿಎಲ್ ಕಾರ್ಡು (BPL Card) ದಾರರಿಗೆ ಪ್ರತಿ ಸದಸ್ಯರಿಗೆ 2 ತಿಂಗಳ 10 ಕೆ.ಜಿ‌. ಉಚಿತ ಅಕ್ಕಿ, ಪ್ರತಿ ಕುಟುಂಬಕ್ಕೆ 1 ತಿಂಗಳಿನ ಉಚಿತ 1 ಕೆ.ಜಿ.ತೊಗರಿ ಬೇಳೆ ವಿತರಿಸಲಾಗುತ್ತದೆ. 19 ಜಿಲ್ಲೆಗಳಿಗೆ ನಾಳೆಯಿಂದ ಪಡಿತರ ವಿತರಣೆ ಮಾಡಲಾಗುತ್ತದೆ, ಉಳಿದ 12 ಜಿಲ್ಲೆಗಳಿಗೆ ಮೇ 3ರಿಂದ ಪಡಿತರ ವಿತರಿಸಲಾಗುತ್ತದೆ. ಕೇಂದ್ರ ಸರ್ಕಾರ ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಪಡಿತರವನ್ನು ನೀಡುತ್ತಿದೆ. ಜೂನ್ ತಿಂಗಳಲ್ಲಿ ಕೇಂದ್ರದ ಐದು ಕೆಜಿ ಅಕ್ಕಿ, 2 ಕೆಜಿ ಬೇಳೆ ಮತ್ತು ರಾಜ್ಯ ಸರ್ಕಾರದ ಐದು ಕೆ.ಜಿ‌ ಅಕ್ಕಿ ಮತ್ತು ಎರಡು ಕೆಜಿ ಗೋಧಿ ವಿತರಿಸಲಾಗುತ್ತದೆ ಎಂದರು.


ಇನ್ನು ಪಡಿತರ ಚೀಟಿ (Ration Card)ಗೆ ಅರ್ಜಿ ಸಲ್ಲಿಸಿರುವ 1,88,512 ಕುಟುಂಬ ವರ್ಗಕ್ಕೂ ಮೂರು ತಿಂಗಳು ಉಚಿತ 10 ಕೆ.ಜಿ‌. ಅಕ್ಕಿ ವಿತರಿಸಲಾಗುತ್ತದೆ. ಎಪಿಎಲ್ ಕಾರ್ಡ್ ಗೆ ಅರ್ಜಿ ಹಾಕಿದ 61,233 ಫಲಾನುಭವಿಗಳಿಗೂ ಪ್ರತಿ ಕೆಜಿಗೆ ರೂ.15ರಂತೆ 10 ಕೆಜಿ ಅಕ್ಕಿ ವಿತರಿಲಾಗುತ್ತದೆ. ಪಡಿತರ ಪಡೆಯಲು ಬೆರಳಚ್ಚು ಬಯೋಮೆಟ್ರಿಕ್ ಅಥವಾ ಒಟಿಪಿ ದೃಢೀಕರಣ ಕಡ್ಡಾಯ ಎಂದು ತಿಳಿಸಿದರು.


ಪೋರ್ಟೆಬಿಲಿಟಿ ಯೋಜನೆ ಜಾರಿಯಿರುತ್ತದೆ. ಇದರಿಂದ ಯಾವುದೇ ಜಿಲ್ಲೆಯ ಹಾಗೂ ದೇಶದ ಯಾವುದೇ ರಾಜ್ಯಗಳ ಪಡಿತರ ಚೀಟಿದಾರರು ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಬಹುದಾಗಿದೆ. ಆಹಾರ ದಾನ್ಯ ವಿತರಣಾ ಸಂಧರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.


ತೂಕದಲ್ಲಿ ಮೋಸ, ಇಲಾಖೆಯ ಪಡಿತರ ಬಿಟ್ಟು ಬೇರೆ ವಸ್ತುಗಳ ಪಡೆಯುವಂತೆ ಒತ್ತಾಯಿಸುವುದು, ಓಟಿಪಿ ಹೆಸರಲ್ಲಿ ಸೇವಾಶುಲ್ಕ ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಂತಹ ನ್ಯಾಯಬೆಲೆ ಅಂಗಡಿಗಳನ್ನು ಅಮಾನತ್ತು ಮಾಡಲಾಗುತ್ತದೆ ಎಂದು‌ ಎಚ್ಚರಿಕೆ ನೀಡಿದರು.