ಮಂಗಳೂರು: ಜ್ಯೋತಿ ಸರ್ಕಲ್ ನಿಂದ ಮೆರವಣಿಗೆ ಹೊರಡುವ ಬಿಜೆಪಿಯ ಪ್ಲಾನ್ಗೆ ಮಂಗಳೂರು ನಗರ ಪೋಲೀಸ್ ಆಯುಕ್ತರು ಅವಕಾಶ ನಿರಾಕರಿಸಿದ್ದರೂ, ಮಂಗಳೂರಿನ ಜ್ಯೋತಿ ಸರ್ಕಲ್ ನಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲು ತಯಾರಿ ನಡೆಸಿದೆ. ಈಗಾಗಲೇ ಬಿಜೆಪಿ ಸಂಸದ ನಳಿನ್ ಕುಮಾರ ಕಟೀಲು ಸ್ಥಳಕ್ಕೆ ಆಗಮಿಸಿದ್ದಾರೆ. ಸರ್ಕಲ್ ನಲ್ಲೇ ಸ್ಟೇಜ್ ತಯಾರಾಗಿದೆ.


COMMERCIAL BREAK
SCROLL TO CONTINUE READING

ಈ ಹಿನ್ನೆಲೆಯಲ್ಲಿ ಬೈಕ್ ರ್ಯಾಲಿ ಅಥವಾ ಮೆರವಣಿಗೆಗೆ ಮುಂದಾಗುವ ನಾಯಕರನ್ನು ಯಾವುದೇ ಮುಲಾಜಿಲ್ಲದೆ ಬಂಧಿಸುವಂತೆ ಗೃಹಸಚಿವ ರಾಮಲಿಂಗಾರೆಡ್ಡಿ ಐಜಿಪಿ ಹೇಮಂತ್ ನಿಂಬಾಳ್ಕರ್ ಅವರಿಗೆ ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂದು ಸೂಚಿಸಿರುವ ರಾಮಲಿಂಗಾರೆಡ್ಡಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಐಜಿಪಿಗೆ ಖಡಕ್ ಸೂಚನೆ ನೀಡಿದ್ದಾರೆ.


ಮತ್ತೊಂದೆಡೆ ರ್ಯಾಲಿ ಹಿನ್ನೆಲೆಯಲ್ಲಿ ಜ್ಯೋತಿ ಸರ್ಕಲ್ ಸಂಪರ್ಕಿಸುವ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಪೋಲೀಸ್ ಆಯುಕ್ತರು ಜ್ಯೋತಿ ಸರ್ಕಲ್ ನಲ್ಲಿ ಪೋಲಿಸ್ ಭದ್ರತೆಯನ್ನು ಹೆಚ್ಚಿಸಿದ್ದಾರೆ. ನೆಹರು ಮೈದಾನದ ಬದಲಾಗಿ ಜ್ಯೋತಿ ಸರ್ಕಲ್ ನಲ್ಲೇ ಭಾಷಣಕ್ಕಾಗಿ ಬಿಜೆಪಿ ಮುಖಂಡರು ವೇದಿಕೆ ಸಿದ್ದಪದಿಸಿದ್ದಾರೆ. 


ಮೆರವಣಿಗೆ ತಡೆಯಲು ಪೊಲೀಸರು ಸಿದ್ದರಾಗಿರುವುದರಿಂದ ಜ್ಯೋತಿ ಸರ್ಕಲ್ ನಲ್ಲೇ ಶಕ್ತಿ ಪ್ರದರ್ಶನ ಮಾಡಲು ಬಿಜೆಪಿ ಸಿದ್ದತೆ ನಡೆಸಿದೆ. 


ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಬಿಗಿ ಭದ್ರತೆ ಯೋಜಿಸಿದ್ದು, ಮೆರವಣಿಗೆಯಲ್ಲಿ ಹೋಗಲು ಅವಕಾಶ ನೀಡುವುದಿಲ್ಲ. ನಗರದ ಶಾಂತಿ ಕದಡುವ ಪ್ರಯತ್ನ ಮಾಡಿದರೆ ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಟಿ.ಆರ್ ಸುರೇಶ ಹೇಳಿಕೆ ನೀಡಿದ್ದಾರೆ.