ಬೆಂಗಳೂರು: '2021 ಅನ್ನು ಹೋರಾಟದ ವರ್ಷ, ಪಕ್ಷ ಸಂಘಟನೆ ವರ್ಷ ಅಂತಾ ಘೋಷಣೆ ಮಾಡಿದ್ದೇವೆ. ಎಲ್ಲ ಬ್ಲಾಕ್ ಅಧ್ಯಕ್ಷರು, ಅವರ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಾಳೆಯಿಂದ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಸದಾಶಿವನಗರದ ತಮ್ಮ ನಿವಾಸದ ಬಳಿ ಡಿ.ಕೆ. ಶಿವಕುಮಾರ್ (DK shivakumar) ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು ಹೇಳಿದ್ದಿಷ್ಟು;


'ಕಾರ್ಯಕರ್ತರ ಧ್ವನಿ ನಾಯಕರ ಧ್ವನಿಯಾಗಬೇಕು. ಈ ನಿಟ್ಟಿನಲ್ಲಿ ನಾಳೆ ಮಂಗಳೂರಿನಲ್ಲಿ ಮೈಸೂರು ವಿಭಾಗದ ಜಿಲ್ಲೆಗಳ ಪಕ್ಷ ನಾಯಕರು, ಬ್ಲಾಕ್ ಅಧ್ಯಕ್ಷರ ಜತೆ ಕರೆದಿದ್ದೇನೆ. ಇದು ಪಕ್ಷದ ಆಂತರಿಕ ಸಭೆ, ಸಾರ್ವಜನಿಕ ಸಭೆಯಲ್ಲ.


ಇದನ್ನೂ ಓದಿ: 'ಹಗಲಿನಲ್ಲಿ ಕೊರೋನಾ ಸೋಂಕು ಹರಡುವುದಿಲ್ಲವೇ?'


ಇಂದು ಮಂಗಳೂರಿಗೆ ತೆರಳಲಿದ್ದು, 7 ರಂದು ವಾಪಸ್ಸಾಗುತ್ತೇನೆ. ಜ. 8 ರಂದು ಬೆಂಗಳೂರಿನಲ್ಲಿ ಸಭೆ ನಡೆಸಿ, ನಂತರ ಹುಬ್ಬಳ್ಳಿಯಲ್ಲಿ ಬೆಳಗಾವಿ ವಿಭಾಗದ ಸಭೆ ಜ. 11ನೇ ತಾರೀಖು ಇದೆ. ಜ.18 ರಂದು ಗುಲ್ಬರ್ಗದಲ್ಲಿ ಸಭೆ ನಡೆಯಲಿದೆ. ನಾನು ಅಲ್ಲೇ ಇರುತ್ತೇನೆ. ಯಾರನ್ನು ಭೇಟಿ ಮಾಡಬೇಕೋ ಅವರನ್ನೆಲ್ಲ ಭೇಟಿ ಮಾಡಿ ಬರುತ್ತೇನೆ.


ಇದೇ ಮಾರ್ಚ್ ನಿಂದ ಇಡೀ ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ. ರಾಜ್ಯದ ಸಮಸ್ಯೆ ಬೇರೆ, ಸ್ಥಳೀಯ ಸಮಸ್ಯೆ ಬೇರೆ. ಉದಾಹರಣೆಗೆ ಬೆಂಗಳೂರಿನಲ್ಲಿ ಮನೆ ಕಟ್ಟುವ ಯೋಜನೆಗೆ ಅನುಮತಿ ನೀಡಲು ಸರಕಾರ ಮೂರರಷ್ಟು ಶುಲ್ಕ ವಿಧಿಸಿದೆ. ಅವರೇ ಲಾಕ್ ಡೌನ್, ಸೀಲ್ ಡೌನ್ ಮಾಡಿ ವ್ಯಾಪಾರಿಗಳಿಗೆ ಆದಾಯ ಇಲ್ಲದಂತೆ ಮಾಡಿದರು. ಹೀಗಾಗಿ ಅವರು ತೆರಿಗೆ ಮನ್ನಾ ಮಾಡುವ ಬದಲು ಹೆಚ್ಚು ಮಾಡುತ್ತಿದ್ದಾರೆ. ಹೀಗೆ ಸ್ಧಳೀಯವಾಗಿ ಅನೇಕ ಸಮಸ್ಯೆಗಳಿವೆ. ಸರ್ಕಾರದ ತೀರ್ಮಾನ, ದೌರ್ಜನ್ಯದ ವಿರುದ್ಧ ಹೋರಾಟ ಮಾಡುತ್ತೇವೆ.


ಇದನ್ನೂ ಓದಿ:  ಸರ್ಕಾರವೇ ರೈತರಿಂದ ಹಸುಗಳನ್ನು ಖರೀದಿಸಲಿ: ಡಿ.ಕೆ. ಶಿವಕುಮಾರ್


ಚುನಾವಣೆ ಗೆಲ್ಲಲು ತಂತ್ರ:


ಅನುಭವ ಮಂಟಪ ಶಂಕುಸ್ಥಾಪನೆ ಚುನಾವಣೆ ತಂತ್ರ. ಬಸವ ಕಲ್ಯಾಣ ಉಪಚುನಾವಣೆ ಗೆಲ್ಲಲು ಈ ರೀತಿ ಮಾಡಿದ್ದಾರೆ. ಆದರೆ ಈ ಯೋಜನೆ ತೀರ್ಮಾನ ಮಾಡಿದ್ದು ನಮ್ಮ ಪಕ್ಷ. ಅವರು ರಾಜಕೀಯಕ್ಕಾಗಿ ಮಾಡುತ್ತಿದ್ದಾರೆ ಮಾಡಿಕೊಳ್ಳಲಿ. ಅವರಿಗಿರುವ ಹಕ್ಕನ್ನು ನಾನು ಪ್ರಶ್ನಿಸುವುದಿಲ್ಲ. 


ಬಿಜೆಪಿ ಅಸಮಾಧಾನದ ಬಗ್ಗೆ ಮಾಧ್ಯಮದವರಿಗೆ ಗೊತ್ತಿರುವಾಗ ಅದರ ಬಗ್ಗೆ ನಾನ್ಯಾಕೆ ಮಾತನಾಡಲಿ. 


ಯುವ ಕಾಂಗ್ರೆಸ್ ಚುನಾವಣೆ


ಪಕ್ಷದಲ್ಲಿ ನಾಯಕರು ಬೆಳೆಯಬೇಕು ಎಂಬುದು ರಾಹುಲ್ ಗಾಂಧಿ ಅವರ ಚಿಂತನೆ. ವಿದ್ಯಾರ್ಥಿ ಚುನಾವಣೆ ನಿಷೇಧದ ನಂತರ, ನಾಯಕತ್ವ ಬೆಳೆಯುವುದಕ್ಕೆ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ತಾಲೂಕು, ಜಿಲ್ಲಾ ಹಾಗೂ ರಾಜ್ಯಗಳ ಮಟ್ಟದಲ್ಲಿ ಸದಸ್ಯತ್ವ ನೋಂದಣಿ ಆಂದೋಲನ ಪ್ರಕ್ರಿಯೆ ಜಾರಿಗೆ ತಂದಿದ್ದಾರೆ. ಕರ್ನಾಟಕದಲ್ಲೂ ಕೂಡ ಅದು ನಡೆಯುತ್ತದೆ. ದೆಹಲಿ ನಾಯಕರು ಹೇಗೆ ಮಾಡುತ್ತಾರೋ ಅದೇ ರೀತಿ ನಾವು ಆಯ್ಕೆ ಪ್ರಕ್ರಿಯೆ ನಡೆಸುತ್ತೇವೆ. ನಾನು ಯಾರ ಪರವಾಗಿಯೂ ನಿಲ್ಲುವುದಿಲ್ಲ. ನನಗೆ ಎಲ್ಲ ಯುವಕರೂ ಒಂದೇ.


ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕೂತು ಯಾರ ಮೇಲೂ ವಿಶೇಷ ಪ್ರೀತಿ ತೋರುವುದಿಲ್ಲ. ಯಾರನ್ನೂ ನಿರ್ಲಕ್ಷ್ಯ ಮಾಡುವುದಿಲ್ಲ. ಪ್ರತಿ ಯುವಕರೂ ಬಹಳ ಮುಖ್ಯ. ಸ್ಪರ್ಧೆ ಇದ್ದು, ಎಲ್ಲರೂ ಶಾಂತಿಯುತವಾಗಿ, ಗೊಂದಲ ಇಲ್ಲದೆ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಎಲ್ಲರ ಜತೆ ಮಾತನಾಡುತ್ತಿದ್ದೇನೆ.


ಚುನಾವಣೆಯಲ್ಲಿ ಪಕ್ಷದ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು ನಮ್ಮ ಬೆಂಬಲಕ್ಕೆ ಇದ್ದಾರೆ ಎಂದು ಭಾವಿಸುವುದರಲ್ಲಿ ತಪ್ಪೇನಿದೆ. ಅವರು ನಮ್ಮ ಪಕ್ಷದವರೇ. ನಾವೆಲ್ಲರೂ ನಮ್ಮ ನಾಯಕರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಎಂದು ನಂಬಿದ್ದೇವೆ.


ಇದನ್ನೂ ಓದಿ: ಯಡಿಯೂರಪ್ಪಗೆ ರೈತರ ಹಿತಕ್ಕಿಂತ ಸರ್ಕಾರ ಉಳಿಸಿಕೊಳ್ಳೋದೇ ಮುಖ್ಯವಾಗಿದೆ: ಡಿ.ಕೆ. ಶಿವಕುಮಾರ್


ಎಲ್ಲ ಆರೋಪವೂ ರಾಜಕೀಯ ಪ್ರೇರಿತ. ನನ್ನ ಮೇಲೂ ಆರೋಪಗಳಿಲ್ಲವೇ? ಅವೆಲ್ಲವೂ ರಾಜಕೀಯ ಆರೋಪ. ನಾನು ಒಬ್ಬರ ಬಳಿ ಲಂಚ ಪಡೆಯಲಿಲ್ಲ, ನನ್ನ ಮೇಲೆ ಎಷ್ಟು ಪ್ರಕರಣ ದಾಖಲಿಸಿದ್ದಾರೆ? ಮಾಧ್ಯಮದವರು ನನ್ನ ಮೇಲೆ ಏನೆಲ್ಲಾ ವರದಿ ಮಾಡಿದ್ದೀರಿ.. ಬಿಜೆಪಿ ನಾಯಕರ ಮೇಲೆ ಯಾವ ಯಾವ ಆರೋಪ ಇದೆ. ಅವರ ಮೇಲೆ ಯಾವುದೇ ಇ.ಡಿ. ಪ್ರಕರಣ ದಾಖಲಾಗಿಲ್ಲ. ಈಗ ಬೇರೆಯವರ ಮೇಲೆ ಪ್ರಕರಣಗಳು ಇಲ್ಲವೇ? ಇಲ್ಲಿ ಆರೋಪಿಯಾಗಿದ್ದವರು ಅಲ್ಲಿಗೆ ಹೋದ ತಕ್ಷಣ ಗಂಗಾಜಲದಂತೆ ಪವಿತ್ರರಾದರಾ?


ಕುಮಾರಸ್ವಾಮಿ ಅವರು ನನ್ನನ್ನು ನೆನಪಿಸಿಕೊಳ್ಳುತ್ತಾರೆ


ಕುಮಾರಸ್ವಾಮಿ ಅವರು ನನ್ನ ಮೇಲೆ ಯಾವ ದಾಳಿ ಮಾಡಿದ್ದಾರೆ? ಎಂಥದ್ದೂ ಇಲ್ಲ. ಕೆಲವು ಸಂದರ್ಭಗಳಲ್ಲಿ ಅವರು ನನ್ನನ್ನು ನೆನಪಿಸಿಕೊಳ್ಳುತ್ತಿರುತ್ತಾರೆ. ಅದಕ್ಕೆ ನಾನ್ಯಾಕೆ ಬೇಸರ ಮಾಡಿಕೊಳ್ಳಬೇಕು?


ನಾನು ಯಾವ ಪಕ್ಷದ ನಾಯಕರನ್ನೂ ಸೆಳೆಯುವ ಪ್ರಶ್ನೆಯೇ ಇಲ್ಲ. ಪಕ್ಷ ಬದಲಿಸುವುದು ಅವರವರ ಆಯ್ಕೆ. ಕಾಂಗ್ರೆಸ್ ನವರೂ ಹೋಗಬಹುದು, ಜೆಡಿಎಸ್ ನವರೂ ಹೋಗಬಹುದು. ಬಿಜೆಪಿಯವರೂ ಹೋಗಬಹುದು. ನಮ್ಮ ನಾಯಕತ್ವ, ಪಕ್ಷದ ಸಿದ್ಧಾಂತಗಳ ಬಗ್ಗೆ ಯಾರಿಗೆ ನಂಬಿಕೆ ಇದೆಯೋ ಅವರು ಬಂದು ಅರ್ಜಿ ಕೊಟ್ಟು ಕಾಂಗ್ರೆಸ್ ಸೇರಬಹುದು.


ನಾನು ಯಾರನ್ನೂ ಎ ಟೀಮ್, ಬಿ ಟೀಮ್ ಎಂದು ಕರೆಯುವುದಿಲ್ಲ. ಹಾಗೆಂದು ನಾನ್ಯಾಕೆ ಕರೆಯಲಿ? ಸಮಯ ಬಂದಾಗ, ಮೈತ್ರಿ ಸನ್ನಿವೇಶ ಬಂದಾಗ ಅವರ ಬಳಿ ನೀವೇ ಈ ಪ್ರಶ್ನೆ ಕೇಳಿ.


ಯಾರೂ ಪಕ್ಷ ಬಿಡಲ್ಲ


ಸಿ.ಎಂ. ಇಬ್ರಾಹಿಂ ಅವರು ನಮ್ಮ ಪಕ್ಷದ ಹಿರಿಯ ನಾಯಕರು, ಮೇಲಾಗಿ ಶಾಸಕರು. ಅವರಿಗೆ ಕೆಲವು ಅಸಮಾಧಾನ ಇರಬಹುದು. ಅದನ್ನು ಪಕ್ಷ ಸರಿಪಡಿಸಲಿದೆ. ಯಾರು ಕೂಡ ಜೆಡಿಎಸ್ ಗೆ ಹೋಗುವುದಿಲ್ಲ. ನಾನು ಇಬ್ರಾಹಿಂ ಅವರ ಜತೆ ಏನು ಮಾತನಾಡಿದ್ದೇವೆ ಎಂಬುದು ನಮಗೆ ಗೊತ್ತು, ಅವರಿಗೆ ಗೊತ್ತು. ನೀವ್ಯಾಕೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತೀರಿ? ಅವರು ಸ್ನೇಹಿತರು, ಹೋಗುತ್ತಾರೆ, ಭೇಟಿ ಮಾಡಿ ಮಾತನಾಡುತ್ತಾರೆ. ರಾಜ್ಯದಲ್ಲಿ ಜಾತ್ಯಾತೀತ ತತ್ವ ಉಳಿಸುವ ಬಗ್ಗೆ ಚರ್ಚೆ ಮಾಡುತ್ತಾರೆ. ಅದರಲ್ಲಿ ತಪ್ಪೇನಿದೆ? ಎಂದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.