ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದ ಶುಲ್ಕ ಶೀಘ್ರ ಪಾವತಿ: ಸಚಿವ ಎಸ್.ಟಿ. ಸೋಮಶೇಖರ್
ಮುಖ್ಯಮಂತ್ರಿಗಳು ಬೆಂಗಳೂರಿನ 8 ವಲಯದ ಉಸ್ತುವಾರಿ ಸಚಿವರ ಜೊತೆ ಚರ್ಚೆ ನಡೆಸಿದ್ದಾರೆ. ನಾವು ಖಾಸಗಿ ಆಸ್ಪತ್ರೆಗಳಿಗೆ ಯಾವುದೇ ಒತ್ತಡ ಹಾಕುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರದಿಂದ ದಾಖಲಾಗುವ ಕೋವಿಡ್-19 (Covid-19) ಸೋಂಕಿತರಿಗೆ ತಗುಲಿವ ಶುಲ್ಕವನ್ನು 15 ದಿನಗಳಲ್ಲಿ ಸರ್ಕಾರದಿಂದ ಪಾವತಿ ಮಾಡುವ ಬಗ್ಗೆಯೂ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗಿದ್ದು, ಶೀಘ್ರದಲ್ಲೇ ಕ್ರಮವಹಿಸಲಾಗುವುದು ಎಂದು ಸಹಕಾರ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜರಾಜಶ್ವರಿ ನಗರ ವಲಯದ ಕೋವಿಡ್ 19 ನಿಯಂತ್ರಣ ಉಸ್ತುವಾರಿಗಳಾದ ಎಸ್.ಟಿ. ಸೋಮಶೇಖರ್ (ST Somashekhar) ತಿಳಿಸಿದರು.
ಪೀಣ್ಯ ಇಂಡಸ್ಟ್ರಿಯಲ್ ಸಬರ್ಬ್ ಸಮೀಪದ ಸುರಾನಾ ಕಾಲೇಜಿನಲ್ಲಿ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಲಕ್ಷ್ಮೀದೇವಿನಗರ ವಿಭಾಗದ ಕಾರ್ಪೋರೇಟರ್ ಗಳು, ಖಾಸಗಿ ಆಸ್ಪತ್ರೆಗಳು, ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆಯಲ್ಲಿ ಮಾತನಾಡಿ, ನಾವು ಯಾವುದೇ ಕಾರಣಕ್ಕೂ ಖಾಸಗಿ ಆಸ್ಪತ್ರೆಗಳಿಗೆ ಬೆದರಿಕೆ ಹಾಕಲ್ಲ. ಯಾವುದೇ ಅಧಿಕಾರಿ ನಿಮಗೆ ಬೆದರಿಕೆ ಹಾಕಿದಲ್ಲಿ ನನಗೆ ಇಲ್ಲವೇ ಐಎಎಸ್ ಅಧಿಕಾರಿ ವಿಶಾಲ್ ಅವರ ಗಮನಕ್ಕೆ ತಂದರೆ ಬಗೆಹರಿಸುತ್ತೇವೆ ಎಂದು ಸಚಿವರು ತಿಳಿಸಿದರು.
ಹಾಗೆ ಬೆದರಿಕೆ ಹಾಕುವ ಅಧಿಕಾರಿಗಳ ಮೊಬೈಲ್ ಸಂಖ್ಯೆಯನ್ನು ಕೊಟ್ಟರೆ ನಾವು ಕ್ರಮ ವಹಿಸುತ್ತೇವೆ. ಅವರೊಂದಿಗೆ ಮಾತನಾಡಿ ಇನ್ನು ಮುಂದೆ ಹಾಗಾಗದಂತೆ ನೋಡಿಕೊಳ್ಳುತ್ತೇವೆ ಎಂದು ಸಚಿವರು ತಿಳಿಸಿದರು.
ಮುಖ್ಯಮಂತ್ರಿಗಳು ಬೆಂಗಳೂರಿನ 8 ವಲಯದ ಉಸ್ತುವಾರಿ ಸಚಿವರ ಜೊತೆ ಚರ್ಚೆ ನಡೆಸಿದ್ದಾರೆ. ನಾವು ಖಾಸಗಿ ಆಸ್ಪತ್ರೆಗಳಿಗೆ ಯಾವುದೇ ಒತ್ತಡ ಹಾಕುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು. ಕೋವಿಡ್ ನಿಂದ ಮೃತಪಟ್ಟ ಪ್ರಕರಣದಲ್ಲೂ ಸಹ ಮೃತದೇಹವನ್ನು ಶೀಘ್ರದಲ್ಲಿ ಹಸ್ತಾಂತರಿಸುವ ಬಗ್ಗೆಯೂ ಕ್ರಮ ವಹಿಸಲಾಗುತ್ತಿದೆ. ಏನೇ ಸಮಸ್ಯೆ ಇದ್ದರೂ ಪತ್ರದ ಮೂಲಕ ಮಾಹಿತಿ ಕೊಟ್ಟರೆ ಬಗೆಹರಿಸಲಾಗುವುದು ಎಂದು ಸಚಿವರು ತಿಳಿಸಿದರು.
ಐಎಎಸ್ ಅಧಿಕಾರಿ ಹಾಗೂ ರಾಜರಾಜೇಶ್ವರಿ ನಗರ ವಲಯ ಕೋವಿಡ್ ನಿಯಂತ್ರಣ ವಿಭಾಗದ ಮುಖ್ಯಸ್ಥರಾದ ವಿಶಾಲ್ ಮಾತನಾಡಿ, ಖಾಸಗಿ ಆಸ್ಪತ್ರೆಗಳು ಸರ್ಕಾರದ ನಿಯಮದಂತೆ ಶೇ.50 ಸೌಲಭ್ಯವನ್ನು ಕೋವಿಡ್ 19 ರೋಗಿಗಳಿಗೆ ನೀಡಬೇಕು. ಇನ್ನು ಸಭೆಯಲ್ಲಿ ವ್ಯಕ್ತವಾದಂತೆ ಸರ್ಕಾರದ ಕಡೆಯಿಂದ ದಾಖಲಾದ ರೋಗಿಗಳ ವೆಚ್ಚವನ್ನು ಆದಷ್ಟು ಬೇಗ ಪಾವತಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಇನ್ನು ಬಿಬಿಎಂಪಿ ವೈದ್ಯದಾಧಿಕಾರಿಗಳು ಮಾತ್ರ ಸಹಿ ಹಾಕಿ ರೆಫರ್ ಮಾಡುವ ಅಧಿಕಾರ ಹೊಂದಿದ್ದಾರೆ ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆಗಳು (Private Hospitals), ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಬಿಬಿಎಂಪಿ ಅಧಿಕಾರಿಗಳು, ಸ್ವಯಂಸೇವಕ ಸಂಘಗಳು, ಎನ್ ಜಿ ಒ ಮುಖ್ಯಸ್ಥರು ಸೇರಿದಂತೆ ಇತರರು ಹಾಜರಿದ್ದರು.