ಹುಬ್ಬಳ್ಳಿಯಲ್ಲಿ ಏಷ್ಯಾದಲ್ಲೇ ಮೊದಲ ತಾಲೂಕು ನ್ಯಾಯಾಲಯ ಸಂಕೀರ್ಣ
ಬೃಹತ್ ತಾಲೂಕು ನ್ಯಾಯಾಲಯಗಳ ಸಂಕೀರ್ಣ ಭಾರತದಲ್ಲಿ ಮಾತ್ರವಲ್ಲದೆ ಇಡೀ ಏಷ್ಯಾದಲ್ಲಿಯೇ ಮೊದಲನೆಯದು ಎನ್ನಲಾಗಿದ್ದು, ಮಾದರಿ ನ್ಯಾಯಾಲಯ ಸಂಕೀರ್ಣ ಎನಿಸಿದೆ.
ಹುಬ್ಬಳ್ಳಿ: ಏಷ್ಯಾದಲ್ಲೇ ಮೊದಲ ತಾಲೂಕು ನ್ಯಾಯಾಲಯಗಳ ಸಂಕೀರ್ಣ ಭಾನುವಾರ ಹುಬ್ಬಳ್ಳಿಯಲ್ಲಿ ಉದ್ಘಾಟನೆಯಾಗಲಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನ್ಯಾಯಾಲಯಗಳ ಸಂಕೀರ್ಣವನ್ನು ಅನಾವರಣಗೊಳಿಸಲಿದ್ದಾರೆ.
5.14 ಎಕರೆ ಬೃಹತ್ ಪ್ರದೇಶದಲ್ಲಿ, 4525 ಚದರ ಮೀಟರ್ ವಿಸ್ತೀರ್ಣದಲ್ಲಿ 122 ಕೋಟಿ ರೂ. ವೆಚ್ಚದಲ್ಲಿ ಈ ಸಂಕೀರ್ಣ ನಿರ್ಮಿಸಲಾಗಿದ್ದು, ಸಂಪೂರ್ಣ ಕೇಂದ್ರೀಕೃತ ಹವಾನಿಯಂತ್ರಿತ ವ್ಯವಸ್ಥೆ ಹೊಂದಿದೆ. ಹೈದರಾಬಾದ್'ನ ಕೆಎಂವಿ ಪ್ರೊಜೆಕ್ಟ್ ಸಂಸ್ಥೆ ಸಂಕೀರ್ಣ ನಿರ್ಮಾಣ ಕಾಮಗಾರಿ ಕೈಗೊಂಡಿದೆ. ಅತ್ಯಾಧುನಿಕ ಸೌಕರ್ಯ ಮತ್ತು ವಿನೂತನ ಮಾದರಿಯ ಈ ಬೃಹತ್ ತಾಲೂಕು ನ್ಯಾಯಾಲಯಗಳ ಸಂಕೀರ್ಣ ಭಾರತದಲ್ಲಿ ಮಾತ್ರವಲ್ಲದೆ ಇಡೀ ಏಷ್ಯಾದಲ್ಲಿಯೇ ಮೊದಲನೆಯದು ಎನ್ನಲಾಗಿದೆ.
ಏನೆಲ್ಲಾ ವ್ಯವಸ್ಥೆ ಇದೆ?
ಏಳು ಅಂತಸ್ತುಗಳ ಈ ನ್ಯಾಯಾಲಯ ಸಂಕಿರಣದಲ್ಲಿ 20 ಕೋರ್ಟ್ ಹಾಲ್, ಸಭಾಂಗಣ, ಕಕ್ಷೀದಾರರಿಗೆ ಆಸನ ವ್ಯವಸ್ಥೆ, 140 ಶೌಚಾಲಯಗಳು, 8 ಲಿಫ್ಟ್'ಗಳು, ಸಾಕ್ಷೀದಾರರಿಗೆ ಕೊಠಡಿಗಳ ಸೌಕರ್ಯ ಇದೆ. ಇದನ್ನು ಹೊರತುಪಡಿಸಿ, ಭದ್ರತಾ ದೃಷ್ಟಿಯಿಂದ ನ್ಯಾಯಾಲಯದ ಸಂಕೀರ್ಣದ ಒಳ ಮತ್ತು ಹೊರ ಭಾಗದಲ್ಲಿ ಸಿಸಿಟಿವಿ, ಅಸೆಸ್ ಕಂಟ್ರೋಲ್ ಸಿಸ್ಟಮ್ ಅಳವಡಿಸಲಾಗಿದೆ. ನ್ಯಾಯಾಧೀಶರು ಅಗತ್ಯವಿರುವ ಪ್ರಕರಣಗಳ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆಯೂ ಇದೆ.
ಯಾವ್ಯಾವ ನ್ಯಾಯಾಲಯಗಳು ಕಾರ್ಯನಿರ್ವಹಿಸಲಿವೆ?
ಏಳು ಅಂತಸ್ತಿನ ಈ ಕಟ್ಟಡದಲ್ಲಿ ಕೌಟುಂಬಿಕ ನ್ಯಾಯಾಲಯ, 2 ಜಿಲ್ಲಾ ನ್ಯಾಯಾಲಯ, 2 ಕಾರ್ಮಿಕ ನ್ಯಾಯಾಲಯ (ಕೈಗಾರಿಕೆ ಮತ್ತು ಕಾರ್ಮಿಕ), 4 ಸಿವಿಲ್ ಜ್ಯೂನಿಯರ್ ವಿಭಾಗೀಯ ನ್ಯಾಯಾಲಯ, 2 ಜೆಎಂಎಫ್‌ಸಿ, ಮೂರು ಸಿನಿಯರ್ ಡಿವಿಜನ್ ನ್ಯಾಯಾಲ್ಯಗಳಿವೆ. ಸದ್ಯ ಈ ಸಂಕೀರ್ಣದಲ್ಲಿ 17 ನ್ಯಾಯಾಲಯಗಳು ಕಾರ್ಯನಿರ್ವಹಿಸದ್ದು, ಇಲ್ಲಿ ಬಾರ್ ಅಸೋಸಿಯೇಶನ್, ಲೈಬ್ರರಿ, ಮಹಿಳಾ ವಕೀಲರಿಗೂ ಕೊಠಡಿಗಳನ್ನು ಕಲ್ಪಿಸಲಾಗಿದೆ.
ಜನರೇಟರ್ ಮತ್ತು ತ್ಯಾಜ್ಯ ನೀರು ಸಂಸ್ಕರಣಾ ಘಟಕ
ವಿದ್ಯುತ್ ಅಡಚಣೆಗೆ ಪರ್ಯಾಯವಾಗಿ ಸಿಂಕ್ರೊನೈಸಿಂಗ್ ವ್ಯವಸ್ಥೆಯುಳ್ಳ 1000 ಕೆವಿಎ, 750 ಕೆವಿಎ, 500 ಕೆವಿಎಯ ಡೀಸೆಲ್ ಜನರೇಟರ್ ಸೆಟ್ಸ್, 160 ಕೆವಿಎ ಸಾಮರ್ಥ್ಯದ ಯುಪಿಎಸ್ ವ್ಯವಸ್ಥೆ, ನೀರು ಮರುಬಳಕೆ ಮಾಡಲು 0.1 ಎಂಎಲ್‌ಡಿ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣ ಘಟಕ, ಮಳೆ ನೀರು ಕೊಯ್ಲು ವ್ಯವಸ್ಥೆ ಕಲ್ಪಿಸಲಾಗಿದೆ. ಈ ಸಂಕೀರ್ಣದ ಮತ್ತೊಂದು ವಿಶೇಷತೆ ಎಂದರೆ ಇದು ಭೂಕಂಪದ ಮುನ್ಸೂಚನೆ ತಿಳಿಸುವ ಅತ್ಯಾಧುನಿಕ ವ್ಯವಸ್ಥೆ ಇದೆ.
ಕಾರ್ಯಕ್ರಮದ ಅತಿಥಿಗಳು
ನೂತನ ನ್ಯಾಯಾಲಯಗಳ ಸಂಕೀರ್ಣ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಮೋಹನ ಎಂ. ಶಾಂತನಗೌಡರ, ಎಸ್. ಅಬ್ದುಲ್ ನಜೀರ್ ಪಾಲ್ಗೊಳ್ಳಲಿದ್ದು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಜಗದೀಶ್ ಶೆಟ್ಟರ್, ಕಂದಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ, ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಸಚಿವ ಕೃಷ್ಣ ಬೈರೇಗೌಡ, ಸಂಸದ ಪ್ರಹ್ಲಾದ ಜೋಶಿ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಹೈಕೋರ್ಟ್ ನ್ಯಾಯಮೂರ್ತಿಗಳಾದ ರವಿ ಮಳಿಮಠ, ಧಾರವಾಡ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಬೂದಿಹಾಳ ಆರ್.ಬಿ. ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ.