ಬೆಂಗಳೂರು: ಕುಮಾರಸ್ವಾಮಿ ಅವರು ಬಂದು ಮಂಡ್ಯದಲ್ಲಿ ಅಶಾಂತಿ ಉಂಟು ಮಾಡಿದ್ದಾರೆ ಎಂದು ಹೇಳಿರುವ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು; 'ಅತಿ ವಿನಯಂ ದೂರ್ತ ಲಕ್ಷಣಂ' ಎಂಬ ಮನೋಭಾವನೆಯ ವ್ಯಕ್ತಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ನಾನು ಮಂಡ್ಯಕ್ಕೆ ಬೆಂಕಿ ಹಚ್ಚಲು ಹೋಗಿರಲಿಲ್ಲ. ಸರಕಾರ ಮಾಡಿರುವ ತಪ್ಪುಗಳನ್ನು ಜನರಿಗೆ ತಿಳಿಸಲು ಹೋಗಿದ್ದೆ. ಗಣರಾಜ್ಯ ದಿನ ಕೆರಗೋಡುನಲ್ಲಿ ಜನವರಿ 26ರಂದು ಗ್ರಾಮಸ್ಥರು ತ್ರಿವರ್ಣ ದ್ವಜ ಹಾರಿಸಿ ಸಂಜೆ ಅದನ್ನು ಇಳಿಸಿದ್ದಾರೆ. ಆ ಗ್ರಾಮದ ಸರಕಾರಿ ಕಾರ್ಯಕ್ರಮಕ್ಕೆ ಸ್ಥಳಿಯ ಶಾಸಕರನ್ನು ಆಹ್ವಾನ ಮಾಡಿಲ್ಲ ಎಂಬ ಕಾರಣಕ್ಕಾಗಿ ಇದೆಲ್ಲಾ ಶುರು ಮಾಡಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಅವರು ಗಂಭೀರ ಆರೋಪ ಮಾಡಿದರು.


ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮ ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು; ಮಂಡ್ಯದಲ್ಲಿ ಇಂದು ಮಾಧ್ಯಮಗಳ ಜತೆ ಸಚಿವರು ಮಾತನಾಡಿದ್ದನ್ನು ನೋಡಿದೆ. ಅವರ ನಯ ವಿನಯ ನಾಜೂಕುತನವನ್ನು ಗಮನಿಸಿದೆ. 'ಅತಿ ವಿನಯಂ ದೂರ್ತ ಲಕ್ಷಣಂ' ಎಂಬಂತೆ ಇತ್ತು ಅವರ ಹಾವಭಾವ ಎಂದು ಲೇವಡಿ ಮಾಡಿದರು.


ಹುಳುಕು ಮುಚ್ಚಿಕೊಳ್ಳಲು ಆರೋಪ:


ನಮ್ಮ ಹಳೆಯ ಸ್ನೇಹಿತರು ಕೆಲವು ಸಲಹೆಗಳನ್ನು ಕೊಟ್ಡಿದ್ದಾರೆ. ಮಂಡ್ಯ ಜಿಲ್ಲೆ ಹಾಳು ಮಾಡಲು ನಾನು ಮಂಡ್ಯಕ್ಕೆ ಹೊಗಿದ್ದೆ ಅಂದಿದ್ದಾರೆ. ಮಂಡ್ಯದ ಘಟನೆಗೂ ನನಗೂ ಏನು ಸಂಬಂಧ ಇದೆ ಎನ್ನುವುದು ಆ ಜಿಲ್ಲೆಯ ಜನರಿಗೆ ಗೊತ್ತಿದೆ. ನಿಮ್ಮ ಆಡಳಿತ ವೈಫಲ್ಯ, ನಡವಳಿಕೆ ಕೆರಗೋಡು ಘಟನೆಗೆ ಕಾರಣ. ಆದರೆ, ತಮ್ಮ ಹಾಗೂ ಸರಕಾರದ ಹುಳುಕು ಮುಚ್ಚಿಟ್ಟಿಕೊಳ್ಳಲು ನನ್ನ ಮೇಲೆ ಅರೋಪ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.


ಕೆರಗೋಡು ಗ್ರಾಮದಲ್ಲಿ ಧ್ವಜಸ್ತಂಭ ಇಳಿಸಿದ ಘಟನೆಯ ಹಿಂದೆ ಏನೆಲ್ಲಾ ನಡೆದಿದೆ ಎನ್ನುವುದು ನನಗೆ ಗೊತ್ತಿದೆ. ಸರ್ಕಾರವೇ ಅಧಿಕಾರಿಗಳನ್ನು ಬಳಕೆ ಮಾಡಿಕೊಂಡು ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಲಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ಈ ಘಟನೆಯನ್ನು ಖಂಡಿಸಿವೆ. ಒಟ್ಟಿಗೆ ಪ್ರತಿಭಟನೆ ಮಾಡಿವೆ. ಬಿಜೆಪಿ ನಾಯಕರ ಜತೆ ನಾನೂ ಆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೇನೆ. ಅಲ್ಲಿ ನಾನು ಏನು ಹೇಳಿದೆ ಎನ್ನುವುದು ಈ ವ್ಯಕ್ತಿಗೆ ಗೊತ್ತಿಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿದರು.


ಪಕ್ಷದ ನಾಯಕರ, ಕಾರ್ಯಕರ್ತರ ದುಡಿಮೆಯನ್ನು ನಾನು ಕೇಸರಿ ಶಾಲು ಹಾಕಿಕೊಂಡು ಬಿಜೆಪಿಗೆ ಒಪ್ಪಿಸಿಬಿಟ್ಟಿದ್ದೇನೆ ಎಂದು ಸಚಿವರು ಟೀಕೆ ಮಾಡಿದ್ದಾರೆ. ಕೇಸರಿ ಶಾಲು ಅಷ್ಟೇ ಅಲ್ಲ, ದಲಿತ ಸಮಾವೇಶಗಳಿಗೆ ಹೋದಾಗ ನೀಲಿ ಶಾಲನ್ನು ಹಾಕಿಕೊಂಡಿದ್ದೇನೆ. ರೈತರ ಸಮಾವೇಶಕ್ಕೆ ಹೋದಾಗ ಹಸಿರು ಶಾಲು ಹಾಕಿದ್ದೇನೆ. ನಾನು ಮಂಡ್ಯದಲ್ಲಿ ಕೇಸರಿ ಶಾಲು ಹಾಕಿದ್ದೆ ಸರಿ, ನನ್ನ ಉಡುಪು ಬಿಳಿ, ನಮ್ಮ ಪಕ್ಷದ ಬಣ್ಣ ಹಸಿರು. ಆದರೆ, ಕೇಸರಿ ಬಗ್ಗೆ ಮಾತ್ರ ಕಾಂಗ್ರೆಸ್ ನಾಯಕರಿಗೆ ಸಂಕುಚಿತ ಮನೋಭಾವ ಇದೆ ಎಂದು ಮಾಜಿ ಮುಖ್ಯಮಂತ್ರಿ ಅವರು ಟೀಕಾಪ್ರಹಾರ ನಡೆಸಿದರು.


ಇದನ್ನೂ ಓದಿ: Union Budget 2024: ನೌಕರ ವರ್ಗದ ಜನರಿಗೆ ಒಂದು ಭಾರಿ ಸಂತಸದ ಸುದ್ದಿ!


ಕಾಂಗ್ರೆಸ್ ನವರು ತಿರಂಗದ ಬಗ್ಗೆ ಈಗ ಮಾತನಾಡುತ್ತಿದ್ದಾರೆ. ತಿರಂಗದಲ್ಲಿ ಕೇಸರಿ, ಬಿಳಿ, ಹಸಿರು ಮೂರು ಬಣ್ಣಗಳಿವೆ. ಕೇಸರಿ ಇಲ್ಲದೆ ತಿರಂಗವನ್ನು ನಾವು ಊಹೆ ಮಾಡಿಕೊಳ್ಳಲು ಆಗುತ್ತದೆಯೇ? ಕಾಂಗ್ರೆಸ್ ಕೇಸರಿ ನೆಪದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.


ಈ ಸಚಿವರಿಂದ ಪಾಠ ಕಲಿಯಬೇಕಿಲ್ಲ:


ಸಮಾಜದಲ್ಲಿ ಶಾಂತಿಯ ವಾತಾವರಣ ತರುವುದನ್ನು ನಿಮ್ಮಿಂದ ನಾನು ಕಲಿಯಬೇಕಾಗಿಲ್ಲ ಎಂದು ಹೆಸರು ಹೇಳದೆಯೇ ಸಚಿವ ಚೆಲುವರಾಯ ಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಮುಖ್ಯಮಂತ್ರಿಗಳು; ಮಂಡ್ಯ ಸಕ್ಕರೆ ಕಾರ್ಖಾನೆ ಆರಂಭಿಸಬಹುದಿತ್ತು ಎಂದಿದ್ದಾರೆ ಅವರು. ನನ್ನ ಸರಕಾರದ ಬಜೆಟ್ ಪುಸ್ತಕ ತೆಗೆದು ನೋಡಲಿ. ನಾನು ಏನು ಕೊಟ್ಟಿದ್ದೇನೆ, ಏನೆಲ್ಲಾ ಘೋಷಣೆ ಮಾಡಿದ್ದೇನೆ ಎನ್ನುವುದು ಗೊತ್ತಾಗುತ್ತದೆ ಎಂದು ಅವರು ಕಿಡಿಕಾರಿದರು.


ಮಂಡ್ಯದಲ್ಲಿ ನಾನು ಮಾತನಾಡುವಾಗಲೂ ಬಹಳ ಸೂಕ್ಷ್ಮವಾಗಿ ಕೆಲವು ವಿಚಾರಗಳನ್ನು ಹೇಳಿದ್ದೇನೆ. ಕೆರಗೋಡು ಜನರ ಭಾವನೆಗಳ ಬಗ್ಗೆ ಮಾತನಾಡಿದ್ದೇನೆ. ಸರಕಾರದ ವೈಫಲ್ಯಗಳ ಬಗ್ಗೆ ಮಾತಾಡಿದ್ದೇನೆ. ನಿಮ್ಮ ಸ್ಥಳೀಯ ಶಾಸಕರಿಗೆ ಹೇಗೆ ಮಾತನಾಡಬೇಕು ಅಂತ ಹೇಳಿಕೊಡಿ ಎಂದು ಸಚಿವರಿಗೆ ಟಾಂಗ್ ನೀಡಿದರು.


ಮುಖ ಮುಚ್ಚಿಕೊಳ್ಳಲು ನಕಲಿ ದಾಖಲೆ ಸೃಷ್ಟಿ:


ಕೆರಗೋಡಿನ ವಿಚಾರ ಹೇಗೆ ಆರಂಭವಾಯಿತು ಎನ್ನುವುದು ಎಲ್ಲರಿಗೂ ತಿಳಿದಿದೆ. ಮೊದಲು ಒಂದು ಪಂಚಾಯಿತಿ ನಿರ್ಣಯದಲ್ಲಿ ದ್ವಜಸ್ತಂಭ ಸ್ಥಾಪಿಸಲು  ಅನುಮತಿ ಕೇಳಿರುವ ಬಗ್ಗೆ ಉಲ್ಲೇಖ ಇದೆ. ಗೌರಿಶಂಕರ ಸೇವಾ ಟ್ರಸ್ಟ್ 27 ನವೆಂಬರ್ ನಲ್ಲಿ ಅರ್ಜಿ ಕೊಟ್ಟಿದೆ. ಆಗ ದ್ವಜಸ್ತಂಭಕ್ಕೆ ಡಿಸೆಂಬರ್ 29ರಂದು ಅನುಮತಿ ಕೊಟ್ಟಿದ್ದಾರೆ. ಇಲ್ಲಿ ತಿದ್ದುವ ಕೈಚಳಕ ನಡೆದಿದೆ. ಡಿಸೆಂಬರ್ ನಲ್ಲಿ ಕೊಟ್ಟಿರುವ ಅನುಮತಿಯಲ್ಲಿ ತ್ರಿವರ್ಣ ದ್ವಜ ಮತ್ತು ಕನ್ನಡ ಭಾವುಟಕ್ಕೆ ಅನುಮತಿ ಅಂತ ಇದೆ ಎಂಬುದನ್ನು ಮಾಜಿ ಮುಖ್ಯಮಂತ್ರಿಗಳು ಮಾಧ್ಯಮಗಳ ಗಮನಕ್ಕೆ ತಂದರು.


ಅಷ್ಟೇ ಅಲ್ಲ, ಕೆರಗೋಡು ಗ್ರಾಮದಲ್ಲಿ ದ್ವಜಸ್ತಂಭದ ಸ್ಥಳದಲ್ಲಿ ನಾನಾ ಪ್ರತಿಮೆಗಳನ್ನು ನಿರ್ಮಾಣ ಮಾಡಲು,  ಬೇರೆ ಬೇರೆ ಸಮಯದಲ್ಲಿ ದಾಖಲೆಗಳನ್ನು ಸೃಷ್ಟಿ ಮಾಡಲಾಗಿದೆ. ಅರ್ಜಿಗಳನ್ನು ಕೊಡಿಸಲಾಗಿದೆ. ಇದೆಲ್ಲವೂ ಪೂರ್ವಯೋಜಿತವಾಗಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಮಾಡಲಾಗಿದೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದವರು.


ಸೋಮವಾರ ಸಂಜೆ ಆರು ಗಂಟೆಗೆ ಪಿಡಿಓ ನ ಸಸ್ಪೆಂಡ್ ಮಾಡಲು ಆದೇಶ ಮಾಡಲಾಗಿದೆ. ಆದರೆ, ಶಾಸಕ ಸಸ್ಪೆಂಡ್ ಮಾಡುತ್ತೇನೆ ಎಂದು ಹೇಳಿಕೆ ಕೊಟ್ಟ ಮೇಲೆ ನಿಮ್ಮ ಸರಕಾರದ ಆದೇಶ ಬಂದಿದೆ. ಇದೆಲ್ಲಾ ಏನು ಸೂಚಿಸುತ್ತದೆ ಎಂದು ಅವರು ಪ್ರಶ್ನಿಸಿದರು.


ಮಂಡ್ಯ ಯಾಕೆ ಈ ರೀತಿ ಆಗಿದೆ. ಕಾಂಗ್ರೆಸ್ ನಾಯಕರ ನಿರ್ಧಾರಗಳಿಂದ ಹೀಗೆ ಆಗಿದೆ. ಲಾಠಿಚಾರ್ಜ್ ಮಾಡುವ ಅವಶ್ಯಕತೆ ಇರಲಿಲ್ಲ. ನಾನು ಜಿಲ್ಲಾಧಿಕಾರಿಗಳಿಗೆ ಐದು ಸಲ ಕರೆ ಮಾಡಿದ್ದೇನೆ. ತಕ್ಷಣ ನಿಮ್ಮ ಅಧಿಕಾರಿಗಳಿಗೆ ಬುದ್ದಿ ಹೇಳಿ ಅಂತ ಹೇಳಿದ್ದೇನೆ. ಇದನ್ನು ಸರ್ಕಾರ ಮಾಡಬೇಕಿತ್ತು. ಸರಕಾರದ ಕೆಲಸವನ್ನು ನಾನು ಮಾಡಿದ್ದೇನೆ.


ಕಾಂಗ್ರೆಸ್ ನವರು ಪೋಲೀಸ್ ಅಧಿಕಾರಿಗಳನ್ನು ಗುಲಾಮರ ರೀತಿ ನಡೆಸಿಕೊಳ್ಳುತ್ತಿದ್ದಾರೆ.  ನನಗೆ ಬೆಂಕಿ ಹಚ್ಚಲು ಹೋಗಿದ್ದೀನಿ ಇವರು ಆರೋಪ ಮಾಡುತ್ತಿದ್ದಾರೆ. 1989ರಲ್ಲಿ ವೀರೇಂದ್ರ ಪಾಟೀಲರನ್ನು ಅಧಿಕಾರದಿಂದ ಇಳಿಸಲು ರಾಮನಗರ, ಚನ್ನಪಟ್ಟಣ ಎರಡೂ ಕಡೆ ಹಿಂದೂ ಮುಸ್ಲಿಂರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದು ಇದೇ ಕಾಂಗ್ರೆಸ್ ಪಕ್ಷದವರು. ಅದನ್ನೆಲ್ಲಾ ಇವರು ಮರೆತಿದ್ದಾರೆ ಎಂದು ಅವರು ಕಿಡಿಕಾರಿದರು.


ಚಿತ್ರದುರ್ಗದಲ್ಲಿ ನಡೆದ ಶೋಷಿತ ಜಾಗೃತಿ ಸಮಾವೇಶದಲ್ಲಿ  ಮುಖ್ಯಮಂತ್ರಿಗಳು ವೀರಾವೇಶದ ಭಾಷಣ ಮಾಡಿದ್ದಾರೆ.  ಸಮಾಜಕ್ಕೆ ಬೆಂಕಿ ಹಚ್ಚುವ ಭಾಷಣ ಅವರದ್ದು. ಮಾಡೋದೆಲ್ಲಾ ಮಾಡಿ ನನ್ನ ಮೇಲೆ ಆರೋಪ ಮಾಡ್ತೀರಾ? ಮಂಡ್ಯಕ್ಕೆ ಬೆಂಕಿ ಹಚ್ಚಿ ದ್ದು ನೀವು.


ತನಿಖೆ ನಡೆಸಿ ಎಂದು ಹೆಚ್ಡಿಕೆ ಸವಾಲು:


ಕೆರಗೋಡು ಗ್ರಾಮದಲ್ಲಿ ಏನು ನಡೆದಿದೆ ಎಂಬ ಬಗ್ಗೆ ವಾಸ್ತವಾಂಶವನ್ನು ನಾನು ತೆರೆದಿಟ್ಟಿದ್ದೇನೆ. ತನಿಖೆ ನಡೆಸುವ ಧೈರ್ಯ ಸರ್ಕಾರಕ್ಕೆ ಇದೆಯಾ? ಏನು ಕ್ರಮ ತಗೊಳ್ತೀರೋ ತೆಗೆದುಕೊಳ್ಳಿ. ಏನು ಪ್ರಾಯಶ್ಚಿತ್ತ ಮಾಡಿಕೊಳ್ತೀರೋ ಮಾಡಿಕೊಳ್ಳಿ ಎಂದು ಕುಮಾರಸ್ವಾಮಿ ಅವರು ಹೇಳಿದರು.


ಇದನ್ನೂ ಓದಿ: Credit Card: ಕ್ರೆಡಿಟ್ ಕಾರ್ಡ್ ಅನ್ನು ಈ ರೀತಿ ಬಳಸಿದರೆ ಸಿಗುತ್ತೆ ಹೆಚ್ಚಿನ ಪ್ರಯೋಜನ


ಎಲ್ಲಿವರೆಗೆ ಜಾತಿ ವ್ಯವಸ್ಥೆ ಇರುತ್ತೆದೆಯೋ ಅಲ್ಲಿಯವರೆಗೆ ಈ ರೀತಿಯ ಸಮಾವೇಶಗಳು ನಡೆಯಬೇಕು ಅಂತ ಭಾಷಣ ಮಾಡಿದ್ದಾರೆ ಸಿಎಂ ಅವರು. ಅಷ್ಟು ಜ್ಞಾನ ಇರುವವರು ಮಹಿಳೆಯೂ ಆಗಿರುವ ರಾಷ್ಟಪತಿಗಳ ಬಗ್ಗೆ ಏನು ಪದ ಬಳಕೆ ಮಾಡಿದ್ದಾರೆ? ಮಾಡೋದೆಲ್ಲ ಮಾಡಿ ಈಗ ಬಂದು ಉಪದೇಶ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.


ಮಾಧ್ಯಮಗೋಷ್ಠಿಯಲ್ಲಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡರು, ಮಾಜಿ ಸಚಿವರಾದ ಅಲಕೊಡ್ ಹನುಮಂತಪ್ಪ, ವೆಂಕಟರಾವ್ ನಾಡಗೌಡ, ಲೀಲಾದೇವಿ ಆರ್ ಪ್ರಸಾದ್, ಮಾಜಿ ಶಾಸಕರಾದ ಸುರೇಶ್ ಗೌಡ, ರಾಜಾ ವೆಂಕಟಪ್ಪ ನಾಯಕ, ತಿಮ್ಮರಾಯಪ್ಪ, ಹಿರಿಯ ನಾಯಕರಾದ ವೀರಭದ್ರಪ್ಪ ಹಾಲಹರವಿ, ಚಂದ್ರಶೇಖರ್, ದೊಡ್ಡನಗೌಡ ಪಾಟೀಲ್, ಪ್ರಸನ್ನ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.