ವಿಶ್ವ ವಿದ್ಯಾಲಯಗಳ ವೆಬ್ ಸೈಟ್ನಲ್ಲಿ ಕನ್ನಡ ಕಡ್ಡಾಯಕ್ಕೆ ಪ್ರಾಧಿಕಾರ ಆದೇಶ
ರಾಜ್ಯದ ವಿಶ್ವ ವಿದ್ಯಾಲಯಗಳ ವೆಬ್ ಸೈಟ್ ಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಇರಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಆದೇಶಿಸಿದ್ದಾರೆ.
ಬೆಂಗಳೂರು : ರಾಜ್ಯದ ಆಡಳಿತದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಜಾರಿಗೆ ತರಲು ಸರ್ಕಾರ ಶ್ರಮಿಸುತ್ತಿರುವ ಬೆನ್ನಲ್ಲೇ, ರಾಜ್ಯದ ವಿಶ್ವ ವಿದ್ಯಾಲಯಗಳ ವೆಬ್ ಸೈಟ್ ಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಇರಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಆದೇಶಿಸಿದ್ದಾರೆ.
ರಾಜ್ಯದಲ್ಲಿರುವ ಹಲವು ವಿಶ್ವವಿದ್ಯಾಲಯಗಳ ವೆಬ್ ಸೈಟ್ಗಳು ಇಂದಿಗೂ ಆಂಗ್ಲ ಭಾಷೆಯಲ್ಲಿಯೇ ಇದ್ದು, ಕನ್ನಡ ಭಾಷೆಯನ್ನು ಅನುಸರಿಸುತ್ತಿಲ್ಲ. ಹಾಗಾಗಿ ಎಲ್ಲ ವೆಬ್ ಸೈಟ್ ನ ಮುಖ ಪುಟಗಳು ಕನ್ನಡ ಭಾಷೆಯಲ್ಲಿರುವಂತೆ ಹಾಗೂ ಕನ್ನಡದಲ್ಲಿ ಮಾಹಿತಿ ಒದಗಿಸುವಂತೆ ಬದಲಿಸಿ ಆಯ್ಕೆ ಭಾಷೆಯಾಗಿ ಇಂಗ್ಲಿಷ್ ಬಳಸುವಂತೆ ಪ್ರಾಧಿಕಾರ ತಿಳಿಸಿದೆ.
ರಾಜ್ಯದ ಹಂಪಿ ಕನ್ನಡ ವಿವಿ ಹೊರತುಪಡಿಸಿ, ಇನ್ನುಳಿದ ವಿವಿಗಳು ಕನ್ನಡದಲ್ಲಿ ಮಾಹಿತಿ ನೀಡುತ್ತಿಲ್ಲ ಎಂದು ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳೂ 15 ದಿನಗಳೊಳಗೆ ವೆಬ್‌ಸೈಟ್‌ಗಳಲ್ಲಿ ಇಂಗ್ಲಿಷ್ ಕೈಬಿಡಬೇಕು. ಮುಖಪುಟದೊಂದಿಗೆ ಒಳಮಾಹಿತಿಗಳೂ ಸಹ ಕಡ್ಡಾಯವಾಗಿ ಕನ್ನಡದಲ್ಲಿಯೇ ಇರುವಂತೆ ರೂಪಿಸಬೇಕು. ಆಯ್ಕೆ ಭಾಷೆಯಾಗಿ ಇಂಗ್ಲಿಷ್ ಬಳಸುವುದಕ್ಕೆ ಅಭ್ಯಂತವಿರಲ್ಲ. ಇಲ್ಲದಿದಲ್ಲಿ, ಈ ಸಂಬಂಧ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಚ್ಚರಿಕೆ ನೀಡಿದೆ.