ಶಿವಮೊಗ್ಗದಲ್ಲಿ ಬಿ.ವೈ.ರಾಘವೆಂದ್ರ ಗೆಲುವು ಖಚಿತ: ಬಿ.ಎಸ್.ಯಡಿಯೂರಪ್ಪ
ಶಿವಮೊಗ್ಗ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನ್ನ ಮಗ ಬಿ.ವೈ.ರಾಘವೇಂದ್ರ 101% ಗೆಲುವು ಸಾಧಿಸುವುದು ಖಚಿತ ಎಂದು ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನ್ನ ಮಗ ಬಿ.ವೈ.ರಾಘವೇಂದ್ರ ಗೆಲುವು ಸಾಧಿಸುವುದು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕುಟುಂಬ ಸಮೇತರಾಗಿ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ ಚಲಾಯಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನ್ನ ಮಗ ಬಿ.ವೈ.ರಾಘವೇಂದ್ರ 101% ಗೆಲುವು ಸಾಧಿಸುವುದು ಖಚಿತ. ಹಾಗೆಯೆ ಜಮಖಂಡಿ ಮತ್ತು ಬಳ್ಳಾರಿಯಲ್ಲಿಯೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಬಿ.ಎಸ್.ಯಡಿಯೂರಪ್ಪ ಮತ್ತು ಪುತ್ರ ಬಿ.ವೈ.ರಾಘವೇಂದ್ರ ಹಾಗೂ ಬಿ.ವೈ.ವಿಜಯೇಂದ್ರ ಸೇರಿ ಕುಟುಂಬಸ್ಥರೆಲ್ಲರೂ ಶಿಕಾರಿಪುರದ ಶ್ರೀ ಹುಚ್ಚುರಾಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್‍ನ ಮೈತ್ರಿ ಅಭ್ಯರ್ಥಿಯಾಗಿ ಮಧುಬಂಗಾರಪ್ಪ, ಬಿಜೆಪಿಯ ಬಿ.ವೈ.ರಾಘವೇಂದ್ರ, ಜೆಡಿಯುನ ಮಹಿಮಾ ಪಟೇಲ್ ಸೇರಿದಂತೆ ನಾಲ್ಕು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಉಪಚುನಾವಣೆಯ ಮತಎಣಿಕೆ ನವೆಂಬರ್ 6 ರಂದು ನಡೆಯಲಿದ್ದು, ಗೆಲುವು ಯಾರ ಮಡಿಲಿಗೆ ಎಂಬುದು ಪ್ರಕಟವಾಗಲಿದೆ.