ಬೆಂಗಳೂರು: ಇನ್ನೇನು 2019 ಮುಗಿಯಲು ಕೆಲವೇ ದಿನ ಬಾಕಿ ಇದೆ. 2020 ಅನ್ನು ಬರಮಾಡಿಕೊಳ್ಳಲು ಎಲ್ಲೆಡೆ ಸಂಭ್ರಮ, ಸಡಗರ ಮನೆ ಮಾಡಿದೆ. ಯುವಕರಂತೂ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಪಾಲ್ಗೊಳ್ಳಲು ತಯಾರಿ ನಡೆಸಿದ್ದಾರೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲು ನಮ್ಮ ಪೊಲೀಸ್ ಪಡೆ ಕೂಡ ಸನ್ನದ್ಧವಾಗಿದೆ.


COMMERCIAL BREAK
SCROLL TO CONTINUE READING

ಹೊಸ ವರ್ಷದಂದು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲು ಹೈ ಸೆಕ್ಯೂರಿಟಿ ಕೈಗೊಳ್ಳಲಾಗಿದ್ದು, ಬೆಳಗ್ಗೆ 8 ಗಂಟೆವರೆಗೆ ಪೊಲೀಸ್ ಬಿಗಿ ಭದ್ರತೆ ಇರಲಿದೆ. ಎರಡು ಪಾಳಿಯಲ್ಲಿ ಪೊಲೀಸರು ಕೆಲಸ ಮಾಡಲಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.


ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಗರದ 8 ವಿಭಾಗಗಳಲ್ಲೂ ಆಯಾ ವಿಭಾಗದ ಡಿಸಿಪಿಗಳು ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ನಿಗಾ ವಹಿಸಿದ್ದಾರೆ. ಬ್ರಿಗೇಡ್ ರಸ್ತೆ, ಎಂ.ಜಿ. ರಸ್ತೆ, ಕೋರಮಂಗಲ, ಇಂದಿರಾನಗರ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. 


ಇದಲ್ಲದೆ ನಗರದಲ್ಲಿ 1500 ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಮಂಗಳೂರು ಗಲಭೆ ವೇಳೆ ಕ್ಯಾಮರಾಗಳಿಗೂ ಹಾನಿ ಮಾಡಲಾಗಿತ್ತು ಹೀಗಾಗಿ ಹೆಚ್ಚಾಗಿ ಹಿಡನ್ ಕ್ಯಾಮರಾಗಳನ್ನು ಬಳಸಲಾಗುವುದು ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.


ಈ ವೇಳೆ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಸಲಹೆ ನೀಡಿರುವ ಬೆಂಗಳೂರು ಪೊಲೀಸ್ ಆಯುಕ್ತರು, ನೀವು ನಿಮ್ಮ ನಂಬಿಕಸ್ತರೊಂದಿಗೆ ಪಾರ್ಟಿಗಳಿಗೆ ಹೋಗಿರುತ್ತಿರಿ. ಅಲ್ಲಿ ಯಾವುದೇ ಕಾರಣಕ್ಕೂ ಗೊತ್ತಿರದ ವ್ಯಕ್ತಿಗಳು ನೀಡುವ ಯಾವುದೇ ಪಾನೀಯಗಳನ್ನು ಸೇವಿಸದಂತೆ ಕಿವಿಮಾತು ಹೇಳಿದ್ದಾರೆ.


ಸಾಧ್ಯವಾದಷ್ಟು ನಿಮ್ಮವರೊಂದಿಗೆ ಇರಿ, ಒಂದೊಮ್ಮೆ ನಿಮಗೆ ಒಬ್ಬರೇ ಪಾರ್ಟಿಯಲ್ಲಿ ಪಾಲ್ಗೊಳ್ಳಬೇಕು ಎಂದಿದ್ದರೆ ನಮ್ಮ ಸಿಬ್ಬಂದಿ ನಿಮ್ಮ ರಕ್ಷಣೆಗೆ ಇದ್ದೇ ಇದ್ದಾರೆ. ಆದರೆ ನೀವು ತಂಡಗಳಲ್ಲಿರಿ, ನಿಮ್ಮವರೊಂದಿಗಿರಿ ಎಂದು ಆಯುಕ್ತರು ಮನವಿ ಮಾಡಿದ್ದಾರೆ.