ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ವಿರುದ್ಧ ಬಂಧನ ರಹಿತ ವಾರೆಂಟ್ ಜಾರಿ
ನ್ಯಾಯಾಲಯಕ್ಕೆ ಹಾಜರಾಗದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿ ಮಾಡಿದೆ.
ಬೆಂಗಳೂರು: ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿ ಮಾಡಿದೆ.
ಮೈಸೂರಿನ ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ಶಾಸಕ ಸೋಮಶೇಖರ್ ಅವರು ಸುಳ್ಳು ಮಾಹಿತಿ ನೀಡಿ ಗ್ಯಾಸ್ ಏಜೆನ್ಸಿ ಪಡೆದಿದ್ದಾರೆಂದು ಮಾಜಿ ಕಾರ್ಪೊರೇಟರ್ ಎಂ.ಸಿ.ಚಿಕ್ಕಣ್ಣ 2008ರ ಮೇ ತಿಂಗಳಿನಲ್ಲಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದರು. ಈ ವಿಚಾರವಾಗಿ ಪತ್ರಿಕಾಗೋಷ್ಠಿ ಕರೆದು ಪ್ರತಿಕ್ರಿಯೆ ನೀಡಿದ್ದ ಎಂ.ಕೆ.ಸೋಮಶೇಖರ್ ಅವರು ಎಂ.ಸಿ.ಚಿಕ್ಕಣ್ಣ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದರಿಂದ ಬೇಸರಗೊಂಡ ಚಿಕ್ಕಣ್ಣ ಅವರು ಸೋಮಶೇಖರ್ ವಿರುದ್ಧ ಮೈಸೂರಿನ ಜೆಎಂಎಫ್‍ಸಿ ಮಾನನಷ್ಟ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು.
ಶಾಸಕ ಎಂ.ಕೆ.ಸೋಮಶೇಖರ್ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರಂಟ್
ಆದರೆ, ಸಂಸದರು ಹಾಗೂ ಶಾಸಕರ ವಿರುದ್ಧ ಹೂಡಲಾದ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ಬೆಂಗಳೂರಿನ 81ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ಎಂ.ಕೆ.ಸೋಮಶೇಖರ್ ಅವರ ಪ್ರಕರಣವು ಬೆಂಗಳೂರಿನ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು. ಅದರಂತೆ ಸೋಮವಾರ ಸೋಮಶೇಖರ್ ಅವರು ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಬೆಂಗಳೂರಿನ 81ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ರಹಿತ ಬಂಧನದ ವಾರಂಟ್ ಜಾರಿ ಮಾಡಿ ಆದೇಶ ಹೊರಡಿಸಿದೆ. ಅಲ್ಲದೆ, ವಿಚಾರಣೆಯನ್ನು ಆಗಸ್ಟ್ 21ಕ್ಕೆ ಮುಂದೂಡಿದೆ.