ಬೆಂಗಳೂರು: ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಸಿಎಂ ನೀಡಿದ್ದ ಗಡುವು ಅಂತ್ಯವಾಗಿದೆ. ನಗರದ ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ವಿಫಲರಾದ ಕಾರಣ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮೂವರು ಅಧಿಕಾರಿಗಳನ್ನು ಅಮಾನತ್ತುಗೊಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರನೇ ಬಾರಿಗೆ ನೀಡಿದ್ದ ಗಡುವು ಮಂಗಳವಾರಕ್ಕೆ ಅಂತ್ಯವಾಗಿದೆ.  ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಬೆಳಗ್ಗೆ 6:30ರಿಂದ ನಗರದ ಹೆಬ್ಬಾಳ, ಯಲಹಂಕ, ಸರ್ವಙ್ಞನಗರ, ಸಿವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಹಾಗೂ ಮಧ್ಯಾಹ್ನದ ನಂತರ ಬಿಬಿಎಂಪಿ ಕೇಂದ್ರ ಕಚೇರಿಯಿಂದ ಮೈಸೂರು ರಸ್ತೆ ಮೇಲ್ಸೇತುವೆ, ವಿಜಯನಗರ ಮತ್ತಿತರ ಕಡೆ ರಸ್ತೆಗಳನ್ನು ಪರಿಶೀಲಿಸುತ್ತಿರುವಾಗ ನಗರದಲ್ಲಿ ಹೆಚ್ಚಿನ ಗುಂಡಿ ಕಂಡುಬಂದ ಹಿನ್ನಲೆಯಲ್ಲಿ ಇ.ಇ. ಅಮೃತ್ ಕುಮಾರ್ ಸೋಲಂಕಿ, ಎ.ಇ.ಇ. ಸೈಫುದ್ದೀನ್, ಎ.ಇ. ಮಲ್ಲಿನಾಥ್ ಎಂಬ ಮೂವರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದಾರೆ.


ಆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಂಜುನಾಥ್ ಪ್ರಸಾದ್ ಇನ್ನೆರಡು ದಿನಗಳಲ್ಲಿ ಪಾಟ್ ಹೋಲ್ ರಿಪೋರ್ಟರ್ ಆಂಡ್ರಾಯ್ಡ್ ಆಪ್ ಬಿಡುಗಡೆ ಮಾಡುತ್ತೇವೆ. ಅಧಿಕಾರಿಗಳು ಮುಖ್ಯರಸ್ತೆಯಲ್ಲಿ ಶೇ.95, ವಾರ್ಡ್ ಮಟ್ಟದಲ್ಲಿ ಶೇ.98 ರಸ್ತೆಗುಂಡಿ ಮುಚ್ಚಿರುವುದಾಗಿ ಮಾಹಿತಿ ನೀಡಿದ್ದಾರೆ. ಆದರೆ ವಾಸ್ತವ ಏನೆಂದು ಆಪ್ ಬಳಸಿ ನಾಗರೀಕರು ಗುಂಡಿ ಮಾಹಿತಿ ನೀಡಬಹುದು. ಅಂತಹ ಗುಂಡಿಗಳನ್ನು ಪಾಲಿಕೆ ಎಂಜಿನಿಯರ್ ಗಳು 48 ಗಂಟೆ ಒಳಗೆ ಮುಚ್ಚಿಸಬೇಕು. ಹೆಚ್ಚು ಗುಂಡಿ ಕಂಡುಬಂದ ಕಡೆ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.


ಪಾಲಿಕೆಯು ಬಿಡುಗಡೆ ಮಾಡುವ ಆಂಡ್ರಾಯ್ಡ್ ಆಪ್ ಬಳಸಿ ನಾಗರೀಕರು ರಸ್ತೆಗುಂಡಿ ಬಗ್ಗೆ ಬಿಬಿಎಂಪಿಗೆ ಕಂಪ್ಲೆಂಟ್ ಮಾಡಿದ ನಂತರ ಅಧಿಕಾರಿಗಳು ಇದುವರೆಗೆ ನೀಡಿದ ವರದಿ ಎಷ್ಟರ ಮಟ್ಟಿಗೆ ಸರಿಯಿದೆ ಅನ್ನುವ ಅಂಶ ಬೆಳಕಿಗೆ ಬರಲಿದೆ.