ಕರಾವಳಿಯಲ್ಲಿ ವರುಣನ ಆರ್ಭಟಕ್ಕೆ ಫಲ್ಗುಣಿ ನದಿ ಸೇತುವೆ ಕುಸಿತ
ಸೇತುವೆ ಕುಸಿತದಿಂದ ಬಂಟ್ವಾಳ ತಾಲೂಕಿನ ಬಡಬೆಳ್ಳೂರು, ಅರಳ ಹಾಗೂ ಮುತ್ತೂರು ಕೊಳವೂರು ನೇರ ಸಂಪರ್ಕ ಕಡಿತ.
ಬಂಟ್ವಾಳ: ಕಳೆದ ಕೆಲ ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ವರುಣನ ಆರ್ಭಟಕ್ಕೆ ಫಲ್ಗುಣಿ ನದಿ ಸೇತುವೆ ಕುಸಿದಿದೆ. ಸೇತುವೆ ಕುಸಿತದಿಂದ ಬಂಟ್ವಾಳ ತಾಲೂಕಿನ ಬಡಬೆಳ್ಳೂರು, ಅರಳ ಹಾಗೂ ಮುತ್ತೂರು ಕೊಳವೂರು ನೇರ ಸಂಪರ್ಕ ಕಡಿತವಾಗಿದೆ.
ಬಂಟ್ವಾಳ ತಾಲೂಕಿನ ಮೂಲರಘಟ್ಟದಲ್ಲಿ ಸುಮಾರು 35 ರಿಂದ 40 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಫಲ್ಗುಣಿ ಸೇತುವೆ ಹಲವು ವರ್ಷಗಳಿಂದ ಕುಸಿಯುವ ಭೀತಿಯಲ್ಲಿತ್ತು. ಈ ಬಗ್ಗೆ ಸ್ಥಳೀಯ ನಿವಾಸಿಗಳು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರೂ, ಜಿಲ್ಲಾಡಳಿತ ಅಧಿಕಾರಿಗಳು ಎಚ್ಚರ ವಹಿಸಿಲ್ಲ ಎಂದು ತಿಳಿದುಬಂದಿದೆ.
ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಫಲ್ಗುಣಿ ನದಿ ತುಂಬಿ ಹರಿಯುತ್ತಿರುವುದರಿಂದ ನೀರಿನ ರಭಸಕ್ಕೆ ಸೇತುವೆ ಪಿಲ್ಲರ್ ಗಳು ಕುಸಿದಿದೆ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಈ ಅವಘಡ ಸಂಭವಿಸಿದ ವೇಳೆ ಸೇತುವೆಯ ಮೇಲೆ ಯಾವ ವಾಹನ ಸಂಚಾರ, ಪಾದಚಾರಿಗಳ ಸಂಚಾರವಿರಲಿಲ್ಲದ ಕಾರಣ ಯಾವುದೇ ಜೀವಹಾನಿ ಸಂಭವಿಸಿಲ್ಲ.