ಬಸವಣ್ಣ, ಸ್ವಾಮಿ ವಿವೇಕಾನಂದರನ್ನು ಕೊಲೆ ಮಾಡಲಾಗಿದೆ: ಕೆ.ಎಸ್.ಭಗವಾನ್ ಹೇಳಿಕೆ
ರಾತ್ರಿಯೆಲ್ಲಾ ಚೆನ್ನಾಗಿದ್ದ ವಿವೇಕಾನಂದರು ಬೆಳಗ್ಗೆ ನೋಡುವಾಗ ಕುಳಿತಲ್ಲೇ ಪ್ರಾಣ ಬಿಟ್ಟರು ಎಂದರೆ ನಂಬಲು ಸಾಧ್ಯವೇ? ಅವರ ವಿಚಾರಧಾರೆಗಳನ್ನು ಸಹಿಸದವರು ಅವರ ಕಟ್ಟು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಭಗವಾನ್ ಅಭಿಪ್ರಾಯ ಪಟ್ಟಿದ್ದಾರೆ.
ಮೈಸೂರು: ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಭಾರಿ ಚರ್ಚೆಗೆ ಗುರಿಯಾಗುವ ಸಾಹಿತಿ ಹಾಗೂ ಚಿಂತಕ ಪ್ರೊ.ಕೆ.ಎಸ್.ಭಗವಾನ್, ಸ್ವಾಮಿ ವಿವೇಕಾನಂದ ಮತ್ತು ಬಸವಣ್ಣ ಅವರನ್ನು ಸಂಚು ರೂಪಿಸಿ ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇಂದು ಮಹಿಷಾ ದಸರಾ ಪ್ರತಿಷ್ಠಾನ ಸಮಿತಿ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ ವಿಚಾರಧಾರೆಗಳ ಬಗ್ಗೆ ಮಾತನಾಡುತ್ತಾ, ಸ್ವಾಮಿ ವಿವೇಕನಂದರು ನಿಜವಾದ ಸನ್ಯಾಸಿಗಳು. ಅವರು ಎರಡನೇ ಗೌತಮ ಬುದ್ಧ. ರಾತ್ರಿ ಎಲ್ಲ ಚೆನ್ನಾಗಿದ್ದ ವಿವೇಕಾನಂದರು ಬೆಳಗ್ಗೆ ನೋಡುವಾಗ ಕುಳಿತಲ್ಲೇ ಪ್ರಾಣ ಬಿಟ್ಟರು ಎಂದರೆ ನಂಬಲು ಸಾಧ್ಯವೇ? ಅವರ ವಿಚಾರಧಾರೆಗಳನ್ನು ಸಹಿಸದವರು ಅವರ ಕಟ್ಟು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಭಗವಾನ್ ಅಭಿಪ್ರಾಯ ಪಟ್ಟಿದ್ದಾರೆ.
ಅಷ್ಟೇ ಅಲ್ಲದೆ, ಕಾಯಕ ಯೋಗಿ ಬಸವಣ್ಣ ಅವರ ಬಗ್ಗೆಯೂ ಪ್ರಸ್ತಾಪಿಸಿದ ಭಗವಾನ್, ಬಸವಣ್ಣನವರು ಕೂಡಲ ಸಂಗಮದ ಕಲ್ಯಾಣದಲ್ಲಿ ಐಕ್ಯರಾದರೆಂಬುದು ಶುದ್ಧ ಸುಳ್ಳು. ಅವರು ಜಾತಿ ವ್ಯವಸ್ಥೆ ವಿರುದ್ಧ ಚಳವಳಿ ಹುಟ್ಟು ಹಾಕಿದವರು. ಕೈಲಾಸ, ಸ್ವರ್ಗ ಎಂಬುದೆಲ್ಲಾ ಸುಳ್ಳು ಎಂದು ಪ್ರತಿಪಾದಿಸಿದ್ದ ಬಸವಣ್ಣನವರು ಏಕೆ ಐಕ್ಯರಾಗಿ ಸಾಯುತ್ತಾರೆ ಹೇಳಿ? ಎಂದು ಪ್ರಶ್ನಿಸಿದರಲ್ಲದೆ, ಈ ಇಬ್ಬರೂ ಮಹಾನ್ ನಾಯಕರನ್ನು ಪಿತೂರಿ ಮಾಡಿ ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ಹೇಳಿಕೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.