ಬಿಬಿಎಂಪಿಯ 51ನೇ ಮೇಯರ್, 50ನೇ ಉಪಮೇಯರ್ ಹುದ್ದೆಗೆ ಇಂದು ಚುನಾವಣೆ
ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೇಸ್-ಜೆಡಿಎಸ್ ಮೈತ್ರಿ
ಬೆಂಗಳೂರು: ಬಿಬಿಎಂಪಿ 51ನೇ ಮೇಯರ್, 50ನೇ ಉಪಮೇಯರ್ ಹುದ್ದೆಗೆ ಇಂದು ಚುನಾವಣೆ ನಡೆಯಲಿದ್ದು ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಹೊಂದಿದೆ. ಬಿಬಿಎಂಪಿ ಮೇಯರ್ ಹುದ್ದೆಯು ಪರಿಶಿಷ್ಟ ಜಾತಿ ವರ್ಗಕ್ಕೆ ಮತ್ತು ಉಪಮೇಯರ್ ಹುದ್ದೆ ಸಾಮಾನ್ಯ ಮಹಿಲಿಗೆ ಮೀಸಲಾಗಿದೆ. ಇಂದು ಬೆಳಿಗ್ಗೆ 11:30 ಕ್ಕೆ ಮತದಾನ ಪ್ರಕ್ರಿಯೆ ಆರಂಭವಾಗಲಿದೆ.
ಮೊದಲಿಗೆ ಮತದಾರರ ಹಾಜರಾತಿ ಪಡೆಯಲಾಗುತ್ತದೆ. ಹಾಜರಾತಿ ಹಾಕದವರಿಗೆ ಮತದಾನದ ಅವಕಾಶವಿರುವುದಿಲ್ಲ. ಕೈ ಎತ್ತುವ ಮೂಲಕ ಮತದಾನದ ಪ್ರಕ್ರಿಯೆ ನಡೆಯುತ್ತದೆ. ಸಂಪೂರ್ಣ ಚುನಾವಣೆ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ.
ಮೇಯರ್ ಮತದಾನದ ನಂತರ ಎಣಿಕೆ ಕಾರ್ಯ ನಡೆಯಲಿದ್ದು ಆನಂತರ ಪ್ರಾದೇಶಿಕ ಆಯುಕ್ತೆ ಜಯಂತಿ ಮೇಯರ್ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡುವರು. ಆನಂತರ ಉಪಮೇಯರ್ ಚುನಾವಣೆ ನಡೆಯಲಿದೆ.
ಬಿಬಿಎಂಪಿ ಒಟ್ಟು ಮತಗಳು 266, ಮಾಜಿಕ್ ನಂಬರ್ 134.... ಪಕ್ಷಗಳ ಬಲಾಬಲ ನೋಡುವುದಾದರೆ ಬಿಜೆಪಿ 126 ಸ್ಥಾನಗಳನ್ನು ಹೊಂದಿದ್ದು, 109 ಸ್ಥಾನ ಹೊಂದಿರುವ ಕಾಂಗ್ರೇಸ್ ಮತ್ತು 24 ಸ್ಥಾನ ಹೊಂದಿರುವ ಜಿಡಿಎಸ್ ಮೈತ್ರಿಯನ್ನು ಹೊಂದಿವೆ. ಅಲ್ಲದೆ 7 ಪಕ್ಷೇತರ ಅಭ್ಯರ್ಥಿಗಳು ಕಾಂಗ್ರೇಸ್-ಜೆಡಿಎಸ್ ಮೈತ್ರಿಗೆ ತಮ್ಮ ಬೆಂಬಲ ಸೂಚಿಸಿವೆ.