ಕೇರಳ, ಕೊಡಗು ನೆರೆ ಪರಿಹಾರಕ್ಕೆ 3.18 ಕೋಟಿ ರೂ. ಧೇಣಿಗೆ ನೀಡಿದ ಬಿಬಿಎಂಪಿ
ಸದಾಶಿವನಗರ ಬಿಡಿಎ ಕ್ವಾಟ್ರಸ್‌ನಲ್ಲಿ ಸೋಮವಾರ ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಅವರು ಚೆಕ್ ವಿತರಿಸಿ, ಟ್ರಕ್‌ಗಳಿಗೆ ಚಾಲನೆ ನೀಡಿದರು.
ಬೆಂಗಳೂರು: ಭಾರಿ ಮಳೆಯಿಂದಾಗಿ ಕೊಡಗು ಹಾಗೂ ಕೇರಳದಲ್ಲಿ ಉಂಟಾಗಿರುವ ನೆರೆ ಪರಿಸ್ಥಿತಿಗೆ ಬಿಬಿಎಂಪಿ ವತಿಯಿಂದ 3.18 ಕೋಟಿ ರೂ. ಚೆಕ್ ಹಾಗೂ ಸಿದ್ದಾರ್ಥ ಶಿಕ್ಷಣ ಸಂಸ್ಥೆ ವತಿಯಿಂದ ನಾಲ್ಕು ಟ್ರಕ್‌ಗಳ ಆಹಾರ ಪದಾರ್ಥ, ಇತರೆ ಪರಿಕರಗಳನ್ನು ಧೇಣಿಗೆ ನೀಡಲಾಗಿದೆ.
ಸದಾಶಿವನಗರ ಬಿಡಿಎ ಕ್ವಾಟ್ರಸ್‌ನಲ್ಲಿ ಸೋಮವಾರ ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಅವರು ಚೆಕ್ ವಿತರಿಸಿ, ಟ್ರಕ್‌ಗಳಿಗೆ ಚಾಲನೆ ನೀಡಿದರು.
ಇದಕ್ಕೂ ಮುನ್ನ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೊಡಗಿನಲ್ಲಿ ಉಂಟಾಗಿರುವ ಭಾರಿ ಮಳೆಯಿಂದ ಅಲ್ಲಿನವರ ಜನಜೀವನ ಅಸ್ತವ್ಯಸ್ಥವಾಗಿದೆ. ಅವರ ನೆರವಿಗೆ ಬಿಬಿಎಂಪಿ ಧಾವಿಸಿದೆ. ಒಟ್ಟು 3.18 ಕೋಟಿ ರೂ. ನೆರವು ನೀಡಲಾಗಿದ್ದು, ಇದರಲ್ಲಿ 1 ಕೋಟಿ ರೂ. ಕೇರಳ ರಾಜ್ಯಕ್ಕೆ ಕಳುಹಿಸಲಾಗುತ್ತಿದೆ. ಉಳಿದ ಹಣವನ್ನು ಮುಖ್ಯಮಂತ್ರಿ ಅವರ ನಿಧಿಗೆ ಹಾಕಲಾಗಿದೆ ಎಂದರು.
ಅಷ್ಟೇ ಅಲ್ಲದೆ, ಬಿಬಿಎಂಪಿ ಸದಸ್ಯರ ಒಂದು ತಿಂಗಳ ಸಂಬಳ, ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಪಾಲಿಕೆ ನೌಕರರ ಒಂದು ದಿನದ ಸಂಬಳವನ್ನು ನೆರೆ ಸಂತ್ರಸ್ತರಿಗೆ ನೀಡಲಾಗುತ್ತಿದೆ.
ಸಿದ್ದಾರ್ಥ ಶಿಕ್ಷಣ ಸಂಸ್ಥೆ ಹಾಗೂ ಬಿಬಿಎಂಪಿಯಿಂದ ತಲಾ ಎರಡು ಟ್ರಕ್ ಬೆಡ್‌ಶೀಟ್, ನೀರು, ಬಿಸ್ಕತ್, ಬೇಳೆಕಾಳುಗಳು ಸೇರಿದಂತೆ ಇತರೆ ಸಾಮಾಗ್ರಿ ಹಾಗೂ ಪರಿಕರಗಳನ್ನು ಕಳುಹಿಸಿಕೊಡಲಾಗುತ್ತಿದೆ ಎಂದು ಪರಮೇಶ್ವರ್ ತಿಳಿಸಿದರು.
ಜತೆಗೆ ಬಿಬಿಎಂಪಿಯಿಂದ 100 ಇ- ಶೌಚಾಲಯ ಹಾಗೂ 300 ಪೌರಕಾರ್ಮಿಕರನ್ನೂ ಕೊಡಗಿಗೆ ಕಳುಹಿಸಲಾಗಿದೆ. ನೀರು, ಒಳಚರಂಡಿ ಸಮಸ್ಯೆಗೆ ಬಿಡಬ್ಲ್ಯೂಎಸ್‌ಎಸ್‌ಬಿ ಯಿಂದ ಮಿಷನ್‌ಗಳು ಹಾಗೂ ಸಿಬ್ಬಂದಿಯನ್ನು ಒದಗಿಸಲಾಗಿದೆ. ಗುಡ್ಡ ಕುಸಿತದಿಂದ ಆ ಭಾಗದ ಜನ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅವರಿಗೆ ಒಂದೇ ದಿನದಲ್ಲಿ ಪ್ರೀ ಫ್ಯಾಬ್ರಿಕ್ ಮಾದರಿಯ ಮನೆ ನಿರ್ಮಿಸಲು ಚಿಂತಿಸಿದ್ದೇವೆ. ಸರ್ಕಾರದ ವತಿಯಿಂದಲೇ ಮನೆ ನಿರ್ಮಿಸಿಕೊಡಲಾಗುವುದು ಎಂದು ಸಿಎಂ ಈಗಾಗಲೇ ಹೇಳಿದ್ದಾರೆ. ಮಳೆ ನಿಂತ ಕೂಡಲೇ ಮನೆ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗುತ್ತದೆ. ಒಟ್ಟಾರೆ ಸರ್ಕಾರ ನಿರಾಶ್ರಿತರೊಂದಿಗೆ ಇರಲಿದೆ ಎಂದು ಡಿಸಿಎಂ ಹೇಳಿದರು.
ಮೈಸೂರಿನಲ್ಲಿ, ಮಂಗಳೂರು, ಹಾಸನದಲ್ಲಿ ಕೇಂದ್ರಗಳನ್ನು ತೆರೆದಿದ್ದು, ದಾನಿಗಳು ಅಗತ್ಯ ಪದಾರ್ಥಗಳನ್ನು ಇಲ್ಲಿಗೆ ತಲುಪಿಸಿದರೆ, ಕೊಡಗಿನ ಜನರಿಗೆ ಇಲ್ಲಿಂದ ಅಗತ್ಯ ವಸ್ತುಗಳು ಪೂರೈಕೆಯಾಗಲಿದೆ ಎಂದು ಪರಮೇಶ್ವರ್ ಹೇಳಿದರು. ಈ ವೇಳೆ ಮೇಯರ್ ಸಂಪತ್‌ರಾಜ್, ಆಯುಕ್ತ ಮಂಜುನಾಥ್ ಪ್ರಸಾದ್, ಡಿಜಿ ನೀಲಮಣಿ ಇದ್ದರು.