ಮೈಸೂರು ರಸ್ತೆ ಭಾಗದಲ್ಲಿ ರಿಯಾಯಿತಿ ದರದಲ್ಲಿ ಸಿಗಲಿದೆ ಬಿಡಿಎ ಅಪಾರ್ಟ್‌ಮೆಂಟ್
ಮೈಸೂರು ರಸ್ತೆ ಭಾಗದಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಿದ್ದು, ಇದರ ಖರೀದಿಗೆ ಮುಂದಾಗುವವರಿಗೆ ಆಫರ್ ನೀಡಲು ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಬೆಂಗಳೂರು: ಮೈಸೂರು ರಸ್ತೆ ಭಾಗದಲ್ಲಿ ಬಿಡಿಎ ನಿರ್ಮಿಸಿರುವ ಬಿಡಿಎ ಅಪಾರ್ಟ್‌ಮೆಂಟ್ ಖರೀದಿಗೆ ಮುಂದಾಗುವ ಸಾರ್ವಜನಿಕರಿಗೆ ಶೇ.5 ರಷ್ಟು ಹಾಗೂ ಒಮ್ಮೆಲೆ 10ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್ ಖರೀದಿಸುವವರಿಗೆ ಶೇ.10 ರಷ್ಟು ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ಬಿಡಿಎ ಕಚೇರಿಯಲ್ಲಿ ನಡೆದ ಬಿಡಿಎ ಆಡಳಿತ ಮಂಡಳಿ ಸಭೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮೈಸೂರು ರಸ್ತೆ ಭಾಗದಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಿದ್ದು, ಇದರ ಖರೀದಿಗೆ ಮುಂದಾಗುವವರಿಗೆ ಆಫರ್ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ಶೀಘ್ರವೇ ಅಪಾರ್ಟ್‌ಮೆಂಟ್ ಖರೀದಿಯಾದರೆ ಮುಂದಿನ ಪ್ರಾಜೆಕ್ಟ್ ಕೈಗೊಳ್ಳಲು ಸಾಧ್ಯ. ಹೀಗಾಗಿ ರಿಯಾಯಿತಿ ಘೋಷಿಸಿದ್ದೇವೆ ಎಂದರು.
ಡಾ.ಶಿವರಾಂ ಕಾರಂತರ ಬಡಾವಣೆ 17 ಗ್ರಾಮಗಳಲ್ಲಿ 3564 ಎಕರೆ ಜಮೀನು ಸ್ವಾಧೀನ ಮಾಡಿ, ಸಾರ್ವಜನಿಕರಿಗೆ ನಿವೇಶನ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಪ್ರಕರಣ ಕುರಿತು ಸುಪ್ರೀಂಕೋರ್ಟ್ ಮೂರು ತಿಂಗಳೊಳಗೆ ನೋಟಿಫೈ ಮಾಡಲು ಆದೇಶ ನೀಡಿತ್ತು. ಅಂತೆಯೇ, ನಿವೇಶ ಹಂಚಿಕೆ ಸಂಬಂಧ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿ, ಸಚಿವ ಸಂಪುಟದಿಂದ ಒಪ್ಪಿಗೆ ಪಡೆದುಕೊಳ್ಳಲಾಗುವುದು ಎಂದು ಹೇಳಿದರು.
ತುಮಕೂರು ರಸ್ತೆ ದಾಸನಪುರ ಹಳ್ಳಿದಲ್ಲಿ ವಿಲ್ಲಾ ಕಟ್ಟಿದ್ದೇವೆ. ಇದಕ್ಕೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಇನ್ನಷ್ಟು ವಿಲ್ಲಾ ಕಟ್ಟಲು ಮಂಜೂರಾತಿ ಕೊಟ್ಟಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು.