ಪುಲ್ವಾಮಾ ದಾಳಿಗೆ ಪ್ರತೀಕಾರವೇ ಪರಿಹಾರವಲ್ಲ: ಹೆಚ್.ಡಿ.ಕುಮಾರಸ್ವಾಮಿ
ಇದು ದಾಳಿ, ಪ್ರತಿದಾಳಿಯ ವಿಚಾರವಲ್ಲ, ಜಮ್ಮು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಿಂದ ಅಮಾಯಕ ಜನರು ಬಲಿಯಾಗುತ್ತಿದ್ದಾರೆ. ಹೀಗಾಗಿ ಕಾಶ್ಮೀರದಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕಿದೆ ಎಂದು ಹೆಚ್. ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಮೈಸೂರು: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಇತ್ತೀಚೆಗೆ ಆತ್ಮಾಹುತಿ ದಾಳಿ ಮಾಡಿದವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದರಿಂದ ಹುತಾತ್ಮರಾದ ಯೋಧರ ಜೀವ ಮರಳಿ ಬರುವುದಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಲ್ವಾಮಾ ದಾಳಿಗೆ ಶೀಘ್ರದಲ್ಲಿಯೇ ತಕ್ಕ ಪ್ರತ್ಯುತ್ತರ ನೀಡುವುದಾಗಿ ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ ಪ್ರತಿಕಾರವೇ ಎಲ್ಲದಕ್ಕೂ ಪರಿಹಾರವಲ್ಲ. ಇದು ದಾಳಿ, ಪ್ರತಿದಾಳಿಯ ವಿಚಾರವಲ್ಲ, ಜಮ್ಮು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಿಂದ ಅಮಾಯಕ ಜನರು ಬಲಿಯಾಗುತ್ತಿದ್ದಾರೆ. ಹೀಗಾಗಿ ಕಾಶ್ಮೀರದಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕಿದೆ. ಇದು ಕೇಂದ್ರದ ಜವಾಬ್ದಾರಿ ಎಂದು ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಅಂತಹ ಒಂದು ಸಂದರ್ಭ ಮುಂದಿನ ದಿನಗಳಲ್ಲಿ ಎದುರಾಗದಂತೆ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೆ, ಮೊದಲು ನಮ್ಮ ದೇಶದಲ್ಲಿ ಭಯೋತ್ಪಾದನೆ ಬಿಕ್ಕಟ್ಟನ್ನು ಬಗೆಹರಿಸಲು ಪ್ರಯತ್ನಿಸಬೇಕು ಎಂದು ಅಭಿಪ್ರಾಯಪಟ್ಟರು.