ಬೆಂಗಳೂರು: ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸಮ್ಮಿಶ್ರ ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ರಾಜ್ಯಾದ್ಯಂತ ಇಂದಿನಿಂದ ಪ್ರವಾಸ ಆರಂಭಿಸಲು ಸಿದ್ಧತೆ ನಡೆಸಿದೆ. 


COMMERCIAL BREAK
SCROLL TO CONTINUE READING

ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಲಕ್ಷ್ಮಣ್ ಸವದಿ ನೇತೃತ್ವದಲ್ಲಿ ರಾಜ್ಯದ ರೈತರ ಸಮಸ್ಯೆ ಅರಿಯಲು ಪ್ರವಾಸಕ್ಕಾಗಿ 6 ತಂಡಗಳನ್ನು ರಚಿಸಲಾಗಿದ್ದು, ಶುಕ್ರವಾರದಿಂದ ಹದಿನೈದು ದಿನಗಳ ರಾಜ್ಯಾದ್ಯಂತ ಪ್ರವಾಸ ಮಾಡಲಿದೆ.


ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಲಕ್ಷ್ಮಣ್ ಸವದಿ ನೇತೃತ್ವದಲ್ಲಿ ಬೆಳಗಾವಿ ನಗರ, ಬೆಳಗಾವಿ ಗ್ರಾಮಾಂತರ, ಬಾಗಲಕೋಟೆ, ವಿಜಯಪುರ, ಉಡುಪಿ, ಮಂಗಳೂರು ಜಿಲ್ಲೆಗಳಲ್ಲಿ, ಶಂಕರಗೌಡ ಪಾಟೀಲ್ ನೇತೃತ್ವ ಬಳ್ಳಾರಿ, ಬೀದರ್, ಕಲಬುರ್ಗಿ ನಗರ, ಕಲಬುರ್ಗಿ ಗ್ರಾಮಾಂತರ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಮತ್ತು ಈಶ್ವರ ಚಂದ್ರ ಹೊಸಮನಿ ನೇತೃತ್ವದಲ್ಲಿ ಮೂರನೇ ತಂಡದ ಕಾರ್ಯ ನಿರ್ವಹಣೆ ಮಾಡಲಿದ್ದು, ಹಾವೇರಿ, ಗದಗ, ಧಾರವಾಡ , ಧಾರವಾಡ ಗ್ರಾಮೀಣ, ಕೊಪ್ಪಳ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದೆ. 


ನಾಲ್ಕನೇ ತಂಡವಾಗಿ ನಂಜುಂಡೇಗೌಡ ಎಂಬುವರ ನೇತೃತ್ವದಲ್ಲಿ ಮೈಸೂರು ನಗರ, ಗ್ರಾಮಾಂತರ, ಹಾಸನ, ಕೊಡಗು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ, ಐದನೇ ತಂಡವಾಗಿ ಪವಿತ್ರಾ ರಾಮಯ್ಯ ನೇತೃತ್ವದಲ್ಲಿ ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಮತ್ತು ಶಿವಪ್ರಸಾದ್ ನೇತೃತ್ವದಲ್ಲಿ 6 ನೇ ತಂಡವು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದೆ. 


ಪ್ರವಾಸ ಸಂದರ್ಭದಲ್ಲಿ ಸಾಲ ಮನ್ನಾ'ಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ರೈತರಿಗೆ ಅರಿವು ಮೂಡಿಸುವುದು, ಆಯಾ ಜಿಲ್ಲೆಗಳ ಮೂಲಭೂತ ಸಮಸ್ಯೆಗಳನ್ನು ಪಟ್ಟಿ ಮಾಡುವುದು, ಕೇಂದ್ರದ ಮೋದಿ ಸರಕಾರದ ಯೋಜನಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಕಾರ್ಯವನ್ನು ತಂಡದ ಸದಸ್ಯರು ಮಾಡಲಿದ್ದಾರೆ.


ಪ್ರವಾಸ ಪೂರ್ಣಗೊಳಿಸಿದ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಜಿಲ್ಲಾವಾರು ವರದಿಗಳನ್ನು ತರಿಸಿಕೊಂಡು ಅಧ್ಯಯನ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 


ಮೈತ್ರಿ ಸರ್ಕಾರ ರಚನೆಯಾದ ಆರಂಭದಿಂದಲೇ ರೈತರ ಸಾಲ ಮನ್ನಾ ವಿಚಾರವಾಗಿ ರಾಜ್ಯದಲ್ಲಿ ಬಂದ್'ಗೆ ಯಡಿಯೂರಪ್ಪ ಕರೆ ನೀಡಿದ್ದರು. ಮೈತ್ರಿ ಸರ್ಕಾರ ಸಾಲ ಮನ್ನಾ ವಿಚಾರವಾಗಿ ಸುಳ್ಳು ಹೇಳುತ್ತಿದೆ. ಇದೊಂದು ರೈತ ವಿರೋಧಿ ಸರಕಾರ ಎಂದು ಆರೋಪಿಸಿ ಬಂದ್ ಮಾಡುವುದಾಗಿ ಹೇಳಿದ್ದರು. ಆದರೆ ಈ ಬಂದ್'ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಬಿಜೆಪಿ ಹೊಸ ಯೋಜನೆ ಆರಂಭಿಸಿದ್ದು, ಮೈತ್ರಿ ಸರ್ಕಾರದ ವಿರುದ್ಧದ ಪ್ಲಾನ್ ಸಕ್ಸಸ್ ಆಗಲಿದೆಯೇ? ಎಂಬುದನ್ನು ಕಾದು ನೋಡಬೇಕಿದೆ.