ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ದಂಗೆಗೆ ಕರೆ ನಿಡುವ ಹೇಳಿಕೆ ಸಂಬಂಧ ರಾಜ್ಯಪಾಲರಿಗೆ ದೂರು ನೀಡಲು ನಿರ್ಧರಿಸಿರುವ ಬಿಜೆಪಿಗೆ, ಶುಕ್ರವಾರ(ಸೆ.21) ಸಂಜೆ 4.30ಕ್ಕೆ ಭೇಟಿ ಮಾಡುವಂತೆ ರಾಜ್ಯಪಾಲರು ಸಮಯ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ತೊಂದರೆ ನೀಡಿದರೆ ಬಿಜೆಪಿ ವಿರುದ್ಧ ದಂಗೆ ಏಳುವಂತೆ ಜನತಗೆ ಕರೆ ನೀಡುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಎಚ್ಚರಿಕೆ ನೀಡಿದ್ದರು. ಈ ಸಂಬಂಧ ಆಕ್ರೋಶಗೊಂಡಿದ್ದ ಬಿಜೆಪಿ ನಾಯಕರು ರಾಜ್ಯಪಾಲರಿಗೆ ಸಿಎಂ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಲು ಸಮಯ ನೀಡುವಂತೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ನಾಳೆ ಸಂಜೆ 4.30ಕ್ಕೆ ಬಿಜೆಪಿ ನಿಯೋಗ ಭೇಟಿಗೆ ರಾಜ್ಯಪಾಲರು ಸಮಯ ನೀಡಿದ್ದಾರೆ.


ಇಂದು ಮಧ್ಯಾಹ್ನ ಚನ್ನಪಟ್ಟಣದಲ್ಲಿ ಮಾತನಾಡುತ್ತಾ, ಬಿಜೆಪಿಯವರು ಸಮ್ಮಿಶ್ರ ಸರಕಾರದ ತಂಟೆಗೆ ಬಂದು ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿದರೆ ನಾವೇನು ಕಡ್ಲೆಪುರಿ ತಿನ್ನುತ್ತಾ ಕೂರಲ್ಲ. ಏನು ಮಾಡಬೇಕು ಅದನ್ನು ಮಾಡುತ್ತೇವೆ. ಈ ಹಿಂದೆ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡರನ್ನು ಸಿಎಂ ಆಗಲು ಬಿಡದಿದ್ದಾಗ ಜನರು ದಂಗೆ ಎದ್ದಿದ್ದರು. ಈಗ ಆ ಇತಿಹಾಸ ಮತ್ತೆ ಮರುಕಳಿಸುತ್ತದೆ. ಬಿಜೆಪಿ ವಿರುದ್ಧ ದಂಗೆ ಏಳುವಂತೆ ರಾಜ್ಯದ ಜನರಿಗೆ ನಾನೇ ಹೇಳುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದರು.


ಇದರಿಂದ ಆಕ್ರೊಶಗೊಂಡಿದ್ದ ಬಿಜೆಪಿ ನಾಯಕರು, ಕುಮಾರಸ್ವಾಮಿ ವಿರುದ್ಧ ಹಲವು ಆರೋಪಗಳನ್ನು ಮಾಡಿದರಲ್ಲದೆ, ರಾಜ್ಯದ ಮುಖ್ಯಮಂತ್ರಿಯಾಗಿ ಜನತೆಯನ್ನು ದಂಗೆ ಏಳುವಂತೆ ಕರೆ ನೀಡುವುದಾಗಿ ಕುಮಾರಸ್ವಾಮಿ ಅವರು ಹೇಳಿರುವುದು ಕಾನೂನಿಗೆ ವಿರುದ್ಧ, ಪ್ರಜಾಪ್ರಭುತ್ವಕ್ಕೆ ವಿರೋಧ. ಆದರೆ ಇಂತಹ ಹೇಳಿಕೆ ನೀಡಿರುವ ಸಿಎಂ ವಿರುದ್ಧ ಐಪಿಸಿ ಸೆಕ್ಷನ್ ಸೆಕ್ಷನ್ 124A ಅಡಿ ರಾಜದ್ರೋಹ ಕೇಸ್ ದಾಖಲಿಸಬೇಕು, ರಾಜ್ಯಪಾಲರು ಮಧ್ಯಪ್ರವೇಶಿಸಿ ಮುಖ್ಯಮಂತ್ರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.