ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ತೊಂದರೆ ನೀಡುತ್ತಿರುವ ಬಿಜೆಪಿ ವಿರುದ್ಧ ದಂಗೆ ಏಳಲು ಜನತೆಗೆ ಕರೆ ನೀಡುವುದಾಗಿ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ನಾಳೆ ರಾಜ್ಯಪಾಲರಿಗೆ ದೂರು ಸಲ್ಲಿಸಲು ಬಿಜೆಪಿ ನಿರ್ಧರಿಸಿದೆ. 


COMMERCIAL BREAK
SCROLL TO CONTINUE READING

ಇಂದು ಸಂಜೆ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ನಾಯಕ ಆರ್.ಅಶೋಕ್, ರಾಜ್ಯದ ಮುಖ್ಯಮಂತ್ರಿಯಾಗಿ ಜನತೆಯನ್ನು ದಂಗೆ ಏಳುವಂತೆ ಕರೆ ನೀಡುವುದಾಗಿ ಕುಮಾರಸ್ವಾಮಿ ಅವರು ಹೇಳಿರುವುದು ಕಾನುನುನಿಗೆ ವಿರುದ್ಧ, ಪ್ರಜಾಪ್ರಭುತ್ವಕ್ಕೆ ವಿರೋಧ. ಆದರೆ ಇಂತಹ ಹೇಳಿಕೆ ನೀಡಿರುವ ಸಿಎಂ ವಿರುದ್ಧ ಐಪಿಸಿ ಸೆಕ್ಷನ್ ಸೆಕ್ಷನ್ 124A ಅಡಿ ರಾಜದ್ರೋಹ ಕೇಸ್ ದಾಖಲಿಸಬೇಕು ಎಂದು ವಾಗ್ದಾಳಿ ನಡೆಸಿದರು. 


ಮುಖ್ಯಮಂತ್ರಿಗಳ ದಂಗೆ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್'ನ ಕೆಲ ಗೂಂಡಾಗಳು ಯಡಿಯೂರಪ್ಪ ಅವರ ಮನೆಗೆ ನುಗ್ಗಿ ಅವರ ಪ್ರಾಣ ತೆಗೆಯಲು ಮುಂದಾಗಿದ್ದರು. ವಿರೋಧ ಪಕ್ಷದ ನಾಯಕನ ಮನೆಗೆ ರಕ್ಷಣೆ ನೀಡಬೇಕು. ಅದು ಸರ್ಕಾರದ ಕರ್ತವ್ಯ. ಆದರೆ, ಸಿಎಂ ಅವರೇ ದಂಗೆ ಏಳುವಂತೆ ಹೇಳಿಕೆ ನೀಡುವುದು  ನೋಡಿದರೆ, ನಾವು ಜಂಗಲ್ ಭೂಮಿಯಲ್ಲಿದ್ದೇವೆ ಎಂದು ಭಾಸವಾಗುತ್ತಿದೆ. ಅರಣ್ಯ ರೋದನೆ ಮಾಡುತ್ತಿರುವ ಪರಿಸ್ಥತಿ ಸಾರ್ವಜನಿಕರಿಗೆ ಬರುತ್ತಿದೆ. ಇದಕ್ಕೆಲ್ಲ ಹೊಣೆ ಯಾರು ಎಂದು ಪ್ರಶ್ನಿಸಿದರು.


ಮುಂದುವರೆದು ಮಾತನಾಡಿದ ಅವರು, ನಾವು ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ, ಅದು ಕೇವಲ ಮಾಧ್ಯಮಗಳ ಹಾಗೂ ಆಡಳಿತ ಪಕ್ಷಗಳ ಸೃಷ್ಟಿ ಎಂದು ಅಶೋಕ್ ಹೇಳಿದರು. ನಮ್ಮನ್ನು ಕರೆದರು ಎಂದು ಶಾಸಕರು ಹೇಳುತ್ತಿರುವುದು ಕೂಡಾ ಕೇವಲ ಹಸಿ ಸುಳ್ಳು, ಬಿಜೆಪಿ ಸರ್ಕಾರ ಬೀಳಿಸುವ ಯತ್ನ ಮಾಡುತ್ತಿಲ್ಲ, ಆದರೆ ಕಾಂಗ್ರೆಸ್‌, ಜೆಡಿಎಸ್ ಪಕ್ಷದ ಶಾಸಕರೇ ಪಕ್ಷ ತೊರೆದು ಬರಲು ಆಲೋಚಿಸುತ್ತಿದ್ದಾರೆ ಎಂದು ಆರ್.ಅಶೋಕ್ ಹೇಳಿದರು.


ಬಿಜೆಪಿ ನಾಯಕರಾದ ಬಿ.ಜೆ.ಪುಟ್ಟಸ್ವಾಮಿ, ಗೋವಿಂದ ಕಾರಜೋಳ ಹಾಗೂ ಇತರರ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.