ಬೆಂಗಳೂರು: ಸಿನೆಮಾ ಕಲೆಕ್ಷನ್ ನಿಂದ ದೇಶದ ಆರ್ಥಿಕತೆ ಅಳೆಯುವ ರಾಜಕಾರಣಿಗಳನ್ನು ಕೊಟ್ಟ ಏಕೈಕ ಪಕ್ಷ ಬಿಜೆಪಿ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಆಡಳಿತರೂಢ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.


COMMERCIAL BREAK
SCROLL TO CONTINUE READING

ಕೆ.ಆರ್.ಪುರಂ ವಿಧಾನಸಭೆ ಕ್ಷೇತ್ರದ ಕಲ್ಕೆರೆ, ಚನ್ನಸಂದ್ರದಲ್ಲಿ ಆಯೋಜಿಸಿದ್ದ ರೋಡ್ ಶೋನಲ್ಲಿ ಭಾಗವಹಿಸಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಾರಾಯಣಸ್ವಾಮಿ ಅವರ ಪರ ಮತ ಯಾಚಿಸಿದ ನಂತರ ಸರಣಿ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ  ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.


'ಸಿನೆಮಾ ಕಲೆಕ್ಷನ್ ಇಂದ ದೇಶದ ಆರ್ಥಿಕತೆ ಅಳೆಯುವ ರಾಜಕಾರಣಿಗಳನ್ನು ಕೊಟ್ಟ ಏಕೈಕ ಪಕ್ಷ ಬಿಜೆಪಿ. ಇಂಥ ಭಯಂಕರ ಪ್ರತಿಭೆಗಳು ದೇಶದ ಮಂತ್ರಿಗಳಾಗಿರುವುದರಿಂದಲೇ ಜಿಡಿಪಿ 4.5 ತಲುಪಿದೆ. ಒಂದು ವೇಳೆ ಸತತ 10 ಹಿಂದಿ ಸಿನೆಮಾಗಳು ಫ್ಲಾಪ್ ಆದರೆ ದೇಶ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಭಾವಿಸಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವರೇ?  ಎಂದು ಅವರು ಪ್ರಶ್ನಿಸಿದ್ದಾರೆ.




ಇನ್ನು ಮುಂದುವರೆದು 'ಮುಖ್ಯಮಂತ್ರಿ ಯಡಿಯೂರಪ್ಪನವರ ಸರ್ಕಾರ ಬಡಜನರ ಹೊಟ್ಟೆ ತುಂಬಿಸುವ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಯೋಜನೆಗಳನ್ನು  ನಿಲ್ಲಿಸುವ ಚಿಂತನೆಯಲ್ಲಿದೆ. ಬಡಜನರ ಅನ್ನ ಕಸಿದು, ಆ ಹಣದಿಂದ ಬಿಜೆಪಿ ನಾಯಕರು ತಮ್ಮ ಕುಟುಂಬ ಉದ್ಧಾರ ಮಾಡಿಕೊಳ್ಳಲು ಹೊರಟಿದ್ದಾರೆ. ಇದು ಆಪರೇಷನ್ ಕಮಲಕ್ಕೆ ಸುರಿದ ಹಣ ಮರಳಿ ಪಡೆಯಲು ಅವರು ಕಂಡುಕೊಂಡ ದಾರಿ' ಎಂದು ಆರೋಪಿಸಿದರು.


ಉಪ ಚುನಾವಣೆ ಮತದಾರರ ಸ್ವಾಭಿಮಾನ‌ ಮತ್ತು ಸ್ವಾರ್ಥ ರಾಜಕಾರಣದ ನಡುವಿನ ಅಗ್ನಿ ಪರೀಕ್ಷೆ ಎಂದು ಬಣ್ಣಿಸಿದ ಸಿದ್ದರಾಮಯ್ಯ ಅನರ್ಹರನ್ನು ತಿರಸ್ಕರಿಸಿ, ಅರ್ಹರಿಗೆ ಮತ ನೀಡಿ ಎಂದು ಪ್ರಚಾರದ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.