ಬೆಂಗಳೂರು: ಗುಂಡಿಗಳ ಮೇಲೆ ಸಂಪತ್ತಿನ ಗೋಪುರ ಕಟ್ಟುವ ಬಿಜೆಪಿ ಸರಕಾರಕ್ಕೆ ಆತ್ಮಸಾಕ್ಷಿ ಎನ್ನುವುದೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಮಂಡ್ಯದಲ್ಲಿ ನಿವೃತ್ತ ಯೋಧರೊಬ್ಬರು ರಸ್ತೆಗುಂಡಿಗೆ ಬಿದ್ದು ಲಾರಿ ಕೆಳಕ್ಕೆ ಸಿಕ್ಕಿ ಜೀವ ಕಳೆದುಕೊಂಡ ಘಟನೆಯ ಬಗ್ಗೆ ಕಂಬನಿ ನೀಡಿರುವ ಅವರು, ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯಾದ್ಯಂತ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಿಗೆ ಬಲಿ ಆಗುವ ಸರಣಿ ಮುಂದುವರಿದಿರುವುದು ಅತ್ಯಂತ ಕಳವಳಕಾರಿ. ಮಂಡ್ಯದಲ್ಲಿ ರಸ್ತೆಗೆ ನಿವೃತ್ತ ಯೋಧರೊಬ್ಬರು ಬಲಿಯಾಗಿರುವುದು ನನಗೆ ತೀವ್ರ ದುಃಖ ಉಂಟು ಮಾಡಿದೆ. ಕರ್ನಾಟಕದ ಕಳಪೆ ರಸ್ತೆಗಳಿಗೆ ಪರಿಹಾರವೇ ಇಲ್ಲವೇ? ಎಂದು ಕಿಡಿಕಾರಿದ್ದಾರೆ.


ಸೇನೆಯಿಂದ ಇತ್ತೀಚೆಗಷ್ಟೇ ನಿವೃತ್ತಿ ಆಗಿದ್ದ ಕುಮಾರ್ (38) ಎಂಬ ಯೋಧರು ಮಂಡ್ಯದ ಕಾರಿಮನೆ ಗೇಟ್ ಬಳಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ರಸ್ತೆಗುಂಡಿಗೆ ಬಿದ್ದೊಡನೆ ಅವರ ಮೇಲೆ ಲಾರಿ ಹರಿದು ಕೊನೆಯುಸಿರೆಳೆದಿರುವುದು ಈ ವ್ಯವಸ್ಥೆಯ ಕರಾಳತೆಗೆ ಹಿಡಿದ ಕನ್ನಡಿ ಎಂದಿದ್ದಾರೆ ಮಾಜಿ ಮುಖ್ಯಮಂತ್ರಿಗಳು.


ಇದನ್ನೂ ಓದಿ : ವಿಧಾನಸಭೆ ಚುನಾವಣೆ 2023: ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಕೊರತೆ!; ಕೈ ಪಾಲಯದ ತಂತ್ರ ಏನು?


ಪೊಲೀಸ್ ತರಬೇತಿ ಪಡೆಯುತ್ತಿದ್ದ ಕುಮಾರ್ ಅವರು, ಬದುಕಿನಲ್ಲಿ ಅರ್ಥಪೂರ್ಣ ಕನಸುಗಳನ್ನು ಕಟ್ಟಿಕೊಂಡಿದ್ದರು. ತಮ್ಮ ತಂದೆಯವರ ಜತೆ ಸಾತನೂರು ಗ್ರಾಮಕ್ಕೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಆ ವೃದ್ಧ ತಂದೆಗೆ ಆಸರೆಯಾಗಿದ್ದ ಪುತ್ರ ಗುಂಡಿಯಿಂದ ಜೀವ ಕಳೆದುಕೊಂಡಿದ್ದು ಕರ್ನಾಟಕದ ಕಳಪೆ ರಸ್ತೆಗಳಿಗೆ ಹಿಡಿದ ಕನ್ನಡಿ. ಕಣ್ಮುಂದೆಯೇ ಜೀವ ಬಿಟ್ಟ ಪುತ್ರನ ಪಾರ್ಥೀವ ಶರೀರದ ಮುಂದೆ ಗೋಳಾಡುತ್ತಿದ್ದ ಆ ವೃದ್ಧ ತಂದೆಯನ್ನು ಕಂಡು ನನ್ನ ಮನಸ್ಸಿಗೆ ಆಘಾತವಾಗಿದೆ. ಇನ್ನೆಷ್ಟು ತಂದೆ ತಾಯಂದಿರು ಇಂಥ ಗುಂಡಿಗಳಿಂದ ಅನಾಥರಾಗಬೇಕು? ಎಂದು ಅವರು ಸರಕಾರವನ್ನು ಪ್ರಶ್ನಿಸಿದ್ದಾರೆ.


ಯೋಧರ ದುರಂತ ಸಾವಿಗೆ ಕಾರಣವಾದ ರಸ್ತೆಯೂ ಸೇರಿ ಮಂಡ್ಯ ನಗರಸಭೆ ವ್ಯಾಪ್ತಿಯ ಎಲ್ಲಾ ರಸ್ತೆಗಳ ಅಭಿವೃದ್ಧಿಗೆ 50 ಕೋಟಿ ರೂ.ಗಳನ್ನು ನಾನು ಮುಖ್ಯಮಂತ್ರಿ ಆಗಿದ್ದಾಗ ಬಿಡುಗಡೆ ಮಾಡಿದ್ದೆ. ದುರಂತ ಎಂದರೆ, ನನ್ನ ಸರಕಾರವನ್ನು ಆಪರೇಷನ್ ಕಮಲದ ಮೂಲಕ ಉರುಳಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಆ 50 ಕೋಟಿ ರೂ. ಹಣವನ್ನು ಕೂಡಲೇ ಹಿಂಪಡೆಯಿತು ಎಂದು ಹೆಚ್ ಡಿಕೆ ಅವರು ದೂರಿದ್ದಾರೆ.


ಇದನ್ನೂ ಓದಿ : ಸರ್ಕಾರಿ ಶಾಲೆ ಏಕಲವ್ಯರು... ಹಿರಿಯರನ್ನು ನೋಡಿ ದೊಣ್ಣೆವರಸೆ ಕಲಿತ ವಿದ್ಯಾರ್ಥಿಗಳು..!


ರಾಜಕೀಯ ಕಾರಣಕ್ಕೆ ಹಣ ವಾಪಸ್ ಪಡೆದ ರಾಜ್ಯ ಬಿಜೆಪಿ ಸರಕಾರವು ರಸ್ತೆಗಳಲ್ಲಿ ಮುಗ್ದ ಜನರ ಹೆಣಗಳನ್ನು ನೋಡಿ ಮೆರೆಯುತ್ತಿದೆ. ಇದು ಅಮಾನುಷ. ಸರಕಾರವು ನೊಂದ ಕುಟುಂಬಕ್ಕೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.


ಮೃತ ಯೋಧರ ಆತ್ಮಕ್ಕೆ ಚಿರಶಾಂತಿ ಸಿಗಲಿ, ದುಃಖತಪ್ತ ಕುಟುಂಬಕ್ಕೆ ನೋವು ಭರಿಸುವ ಆ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಟ್ವೀಟ್ ಮೂಲಕ ಪ್ರಾರ್ಥಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.