ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೆ ಖಾತೆ ತೆರೆಯಲಾಗದು ಎಂಬ ಮಾತು ಇತ್ತು. ಅದನ್ನು ನಮ್ಮ ಸರ್ಕಾರ ಅಳಿಸಿ ಹಾಕಿದೆ.  ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಮಂಡ್ಯಕ್ಕೆ ಒಬ್ಬ ಪ್ರತಿನಿಧಿ ಸಿಕ್ಕಿದ್ದಾರೆ ಎಂದು  ಉಪಮುಖ್ಯಮಂತ್ರಿ ಡಾ. ಸಿಎನ್‌ ಅಶ್ವತ್ಥನಾರಾಯಣ(Dr. CN Ashwathnarayana) ಗೆಲುವಿನ ಸಂಭ್ರಮ ಹಂಚಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಉಪ ಚುನಾವಣೆಯಲ್ಲಿ ಜಯ ಸಾಧಿಸಿರುವ  ಪಕ್ಷದ ಎಲ್ಲ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ಸೋಮವಾರ ಮಾಧ್ಯಮಗಳ ಜತೆ ಮಾತನಾಡಿದರು. "ಕೆ.ಆರ್‌.ಪೇಟೆ ಜನರ ಆಶೀರ್ವಾದಿಂದ ನಾರಾಯಣಗೌಡ(Narayangowda)ರು ಈ ಅಗ್ನಿ ಪರೀಕ್ಷೆ ಗೆದ್ದು ಬಂದಿದ್ದಾರೆ. ಕ್ಷೇತ್ರದಲ್ಲಿ ಜನರ ವಿಶ್ವಾಸ ಗಳಿಸಿ,  ಗೆಲುವಿನ ನಗೆ ಬೀರಿದ್ದಾರೆ. ಮಂಡ್ಯಕ್ಕೆ ಈ ಸರ್ಕಾರದಲ್ಲಿ ಪಾಲಿರಬೇಕು. ಮಂಡ್ಯ ಎಲ್ಲ ರೀತಿಯಲ್ಲಿ ಅಭಿವೃದ್ಧಿ ಆಗಬೇಕು. ಯಾವುದೋ ಒಂದು ಕುಟುಂಬ ಅಥವಾ ವ್ಯಕ್ತಿಗೆ ಸೀಮಿತವಾಗಿರಬಹುದು. ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ ವಿಷಯವಾಗಬೇಕು ಎಂಬ ಅಭಿಪ್ರಾಯವನ್ನು ಜನರ ಮುಂದಿಟ್ಟಿದ್ದೆವು. ಜನ ಅದಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆ. ನಮ್ಮನ್ನು ಬೆಂಬಲಿಸಿ ಕೈ ಹಿಡಿದ ಮಂಡ್ಯದ ಜನರಿಗೆ ನನ್ನ ನಮಸ್ಕಾರ," ಎಂದು ಕೆ.ಆರ್‌. ಪೇಟೆ ಚುನಾವಣೆ ಉಸ್ತುವಾರಿ ವಹಿಸಿದ್ದ ಸಚಿವರು ಕೃತಜ್ಞತೆ ಸಲ್ಲಿಸಿದ್ದಾರೆ.  


ಕೆ.ಆರ್. ಪೇಟೆ ವಿಧಾನಸಭೆ ಕ್ಷೇತ್ರ(KR Pet Assembly constituency)ದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ನಾರಾಯಣಗೌಡರು ಅಂದು ಕೈಗೊಂಡ ದಿಟ್ಟ ನಿರ್ಣಯ ನಿಜಕ್ಕೂ ಅಚ್ಚರಿ ಮೂಡಿಸಿತ್ತು. ಕೆ.ಆರ್‌. ಪೇಟೆಯಲ್ಲಿ ಇಂಥ ನಿರ್ಣಯ ಕೈಗೊಳ್ಳುವುದು ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಹಲವರು ವಿಶ್ಲೇಷಿಸಿದ್ದರು.  ಆದರೆ, ಇಂಥ ಮಾತುಗಳಿಗೆ ಕಿವಿಗೊಡದೇ ದಿಟ್ಟ ನಿರ್ಧಾರ ಕೈಗೊಂಡರು.  ನಮ್ಮ ಪಕ್ಷ, ನಮ್ಮ ಸರ್ಕಾರ ಅವರಿಗೆ ಸಂಪೂರ್ಣ ಬೆಂಬಲ ಕೊಟ್ಟು, ಗೆಲುವಿಗೆ ಸಹಕರಿಸಿತು," ಎಂದು ಗೆಲುವಿನ ಹಾದಿಯನ್ನು ವಿವರಿಸಿದರು.  


"ನಮ್ಮ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ(BS Yediyurappa) ಕೆ.ಆರ್‌. ಪೇಟೆ ಕ್ಷೇತ್ರಕ್ಕೆ ಸೇರಿದವರು.  ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಸತ್ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಜನ ಅವರ ಕೈಹಿಡಿದು ಬೆಂಬಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ  ಕ್ಷೇತ್ರದ ಹೆಮ್ಮೆಯ ಮಗ ಬಿ.ಎಸ್. ಯಡಿಯೂರಪ್ಪ ಅವರಿಗೆ ಜನ ಇನ್ನೂ ಹೆಚ್ಚಿನ ಮಾನ್ಯತೆ, ಗೌರವ ತಂದುಕೊಟ್ಟಿದ್ದಾರೆ. ಕೆ.ಆರ್‌. ಪೇಟೆಯಲ್ಲಿ ಯುವ ನಾಯಕ ವಿಜಯೇಂದ್ರ, ಪ್ರೀತಂ ಗೌಡ,  ಶಂಕರಗೌಡ ಪಾಟೀಲರು ಹಾಗೂ ಪಕ್ಷದ ಎಲ್ಲ  ಕಾರ್ಯಕರ್ತರು ಗೆಲುವಿಗೆ ಶ್ರಮಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ನಮಗೆ ಅಲ್ಲಿ ಸ್ಥಾನ ಕೊಟ್ಟ ಜನರಿಗೆ ಧನ್ಯವಾದ," ಎಂದು ಹೇಳಿದ್ದಾರೆ.


ಭದ್ರಕೋಟೆಯನ್ನು ಕೆಡವಿ, ಕುಟುಂಬಕ್ಕಿಂತ ಅಭಿವೃದ್ಧಿಯೇ ಮುಖ್ಯ ಎಂಬುದನ್ನು ಪ್ರಬುದ್ಧ ಮತದಾರರು ತೋರಿಸಿಕೊಟ್ಟಿದ್ದಾರೆ.  ಕ್ಷೇತ್ರದ ಹಿತಕ್ಕಾಗಿ ಸ್ವಾರ್ಥ ಮರೆತು ಅಂದು ನಾರಾಯಣಗೌಡರು ಕೈಗೊಂಡ ನಿರ್ಣಯಕ್ಕೆ ಇವತ್ತು ಬೆಲೆ ಬಂದಿದೆ. ರಾಜಕೀಯವಾಗಿ ಕೆಆರ್‌ ಪೇಟೆಯನ್ನು ದೊಡ್ಡ ಶಕ್ತಿಯಾಗಿ ರೂಪಿಸಲು ಬಲ ತುಂಬಿರುವ ಮತದಾರರಿಗೆ ನಾನು ಚಿರಋಣಿ ಎಂದವರು ತಿಳಿಸಿದರು.