ಬೆಂಗಳೂರು: ರಾಜ್ಯ ಸರ್ಕಾರ ಬೀಳುವ ಮತ್ತು ಬಿಜೆಪಿ ಸರ್ಕಾರ ರಚಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಇಂದು ಬಿಜೆಪಿ ಹೈಕಮಾಂಡ್​ ನಾಯಕರು ರಾಜ್ಯಕ್ಕೆ ಆಗಮಿಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಸೂಚನೆ ಮೇರೆಗೆ ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್​ ರಾವ್​ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ರಾಜ್ಯ ರಾಜಕೀಯದಲ್ಲಾಗುತ್ತಿರುವ ಬದಲಾವಣೆಗಳ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.‌ ಯಡಿಯೂರಪ್ಪ ಅವರಿಂದ ಮಾಹಿತಿ ಪಡೆಯುತ್ತಿರುವ ಅಮಿತ್​ ಶಾ ಈಗ 'ಕ್ರೈಸೀಸ್ ಮ್ಯಾನೇಜ್ಮೆಂಟ್'ಗಾಗಿ ಪ್ರಕಾಶ್ ಜಾವ್ಡೇಕರ್ ಮತ್ತು ಮುರುಳೀಧರ ರಾವ್ ಅವರನ್ನು  ಕಳುಹಿಸಿ‌ಕೊಡುತ್ತಿದ್ದಾರೆ.


ದೂರವಾಣಿ ಮೂಲಕ ನಿರಂತರವಾಗಿ ಮಾಹಿತಿ ಪಡೆಯುತ್ತಿರುವ ಅಮಿತ್ ಶಾ ಅವರಿಗೆ ಈಗ ರಾಜ್ಯದ ಮೈತ್ರಿ ಸರ್ಕಾರದ ಪತನವಾಗುವುದು ಖಚಿತ ಎನಿಸಿದೆ.‌ ಇದೇ ಹಿನ್ನೆಲೆಯಲ್ಲಿ ಅವರು ನಾಳೆ ಬಿಜೆಪಿ ಶಾಸಕಾಂಗ ಸಭೆ ಕರೆಯುವಂತೆ ಯಡಿಯೂರಪ್ಪಗೆ ಸೂಚನೆ ನೀಡಿದ್ದಾರೆ. ಸಭೆಯಲ್ಲಿ ಉಪಸ್ಥಿತರಿರುವಂತೆ ಪ್ರಕಾಶ್ ಜಾವ್ಡೇಕರ್ ಮತ್ತು ಮುರಳೀಧರಾವ್ ಗೂ ತಿಳಿಸಿದ್ದಾರೆ ಎನ್ನಲಾಗಿದೆ.


ಬಿಜೆಪಿಯ ಕೆಲವು ಶಾಸಕರನ್ನು‌  ಸೆಳೆಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಾಯಕರು ಪ್ರಯತ್ನಿಸುತ್ತಿರುವುದರಿಂದ ಎಚ್ಚರಿಕೆಯ ಹೆಜ್ಜೆ ಇಡುವಂತೆ, ಶಾಸಕರ ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವಂತೆ ಜೊತೆಗೆ ಯಾವ ಶಾಸಕ ಕಾಂಗ್ರೆಸ್​ ಮತ್ತು ಜೆಡಿಎಸ್​ ಮುಖಂಡರ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಕಲೆಹಾಕಿ ಕೂಡಲೇ ಮನವೊಲಿಸುವಂತೆ ರಾಜ್ಯ ನಾಯಕರಿಗೆ ಮತ್ತು ಉಸ್ತುವಾರಿಗಳಿಗೆ ಅಮಿತ್ ಶಾ ತಾಖೀತು ಮಾಡಿದ್ದಾರೆ ಎನ್ನಲಾಗಿದೆ.


ನಾಳೆ ನಡೆಯಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಎಲ್ಲದಕ್ಕೂ ಸಿದ್ಧರಾಗಿ ಬರುವಂತೆ ಬಿಎಸ್​ವೈ ಶಾಸಕರಿಗೆ ಸೂಚನೆ ನೀಡಿದ್ದಾರೆ. ಹಾಗಾಗಿ ಸಭೆ ಬಳಿಕ ಎಲ್ಲರೂ ಒಟ್ಟಾಗಿ ರೆಸಾರ್ಟ್​ಗೆ ತೆರಳುವ ಸಾಧ್ಯತೆ ಇದೆ.