ಪಕ್ಷ ಸಂಘಟನೆಗೆ ಬಿಜೆಪಿಯಿಂದ `ಹೊಸ ತಂತ್ರ`! 90 ಸಾವಿರ ಕಾರ್ಯಕರ್ತರಿಗೆ ಅಧಿಕಾರ
`ಬಿಜೆಪಿ ಪ್ರಕೋಷ್ಠಗಳ ಸಂಚಾಲಕರ ಮತ್ತು ಸಹ ಸಂಚಾಲಕರ ಸಭೆ` ಉದ್ಘಾಟನೆ
ದಾವಣಗೆರೆ: ಮಧ್ಯ ಕರ್ನಾಟಕ ದಾವಣಗೆರೆಯಿಂದಲೇ 'ಬಿಜೆಪಿ ಪ್ರಕೋಷ್ಠಗಳ ಸಂಚಾಲಕರ ಮತ್ತು ಸಹ ಸಂಚಾಲಕರ ಸಭೆ' ಉದ್ಘಾಟನೆಗೊಳ್ಳುತ್ತಿದ್ದು, ರಾಜ್ಯದಲ್ಲಿ 90,000 ಪ್ರಕೋಷ್ಠ ಕಾರ್ಯಕರ್ತರಿಗೆ ಅಧಿಕಾರ ಸಿಗಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ನಗರದ ಹೊರ ವಲಯದ ಅಪೂರ್ವ ರೆಸಾರ್ಟ್‌ನಲ್ಲಿ ಇಂದು ರಾಜ್ಯ ಬಿಜೆಪಿ(BJP) ಪ್ರಕೋಷ್ಠಗಳ ಸಂಚಾಲಕರ ಮತ್ತು ಸಹ ಸಂಚಾಲಕರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಮೊದಲು ಕರ್ನಾಟಕದಿಂದ ಪ್ರಕೋಷ್ಠಗಳನ್ನು ರಚಿಸಲಾಯಿತು. ತದ ನಂತರ ಬೇರೆ ರಾಜ್ಯದಲ್ಲಿ ಪ್ರಕೋಷ್ಠಗಳು ಹುಟ್ಟಿಕೊಂಡವು ಎಂದರು.
ಸಾಮಾನ್ಯವಾಗಿ ವೈದ್ಯರು, ಲಾಯರ್, ಬಿಸಿನೆಸ್, ಶಿಕ್ಷಣ, ಎಂಜಿನಿಯರ್ ಸೇರಿದಂತೆ ಎಲ್ಲ ವರ್ಗದವರಲ್ಲಿ ಸಾಕಷ್ಟು ಟ್ಯಾಲೆಂಟ್ ಇದ್ದು, ಬಿಜೆಪಿ ಬೆಂಬಲಿಸುತ್ತಿದ್ದಾರೆ. ಆದರೆ ಅವರಿಗೆ ಪಕ್ಷದ ವಿಚಾರ, ಸಿದ್ದಾಂತಗಳು ಗೊತ್ತಿಲ್ಲ. ಆದ್ದರಿಂದ ಅವರಿಗೆ ರಾಜಕಾರಣದ ಬಾಗಿಲು ತೆರೆಯಿಸಿ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುವುದೇ ಪ್ರಕೋಷ್ಠ ಉದ್ದೇಶ. ಒಟ್ಟು 20 ಪ್ರಕೋಷ್ಠಗಳನ್ನು ಮಾಡಲಾಗುತ್ತಿದ್ದು, ಎಲ್ಲ ಜಿಲ್ಲೆಗಳಲ್ಲಿ ಇದು ಆರಂಭಗೊಳ್ಳುತ್ತದೆ ಎಂದರು.