ಬೆಂಗಳೂರು: ಮಹದಾಯಿ ನೀರು ಹಂಚಿಕೆ ಸಮಸ್ಯೆ ಬಗೆಹರಿಸಿ ಮುಂಬರುವ ಚುನಾವಣೆಯಲ್ಲಿ ಅದನ್ನೇ ಮತ ಬ್ಯಾಂಕ್ ಆಗಿ ಮಾಡಿಕೊಳ್ಳಲು ಯೋಜಿಸಿದ್ದ ಬಿಜೆಪಿ ನಾಯಕರು, ಅತ್ತ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಮನವೊಲಿಸಲೂ ಸಾಧ್ಯವಾಗದೇ, ಇತ್ತ ರಾಜ್ಯ ಕಾಂಗ್ರೇಸ್ ಸರ್ಕಾರದ ಮೇಲೂ ಹೊರಿಸಲಾಗದೆ ಇಕ್ಕಟ್ಟಿಗೆ ಸಿಲುಕಿದ್ದಾರೆ.


COMMERCIAL BREAK
SCROLL TO CONTINUE READING

ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಇತ್ತೀಚಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಬಿಜೆಪಿ ನಾಯಕರು ಮೌನಕ್ಕೆ ಜಾರುವ ಮೂಲಕ ತಟಸ್ಥ ನಿಲುವು ತಳೆದಿದ್ದಾರೆ.


ಒಂದೆಡೆ ಮಹದಾಯಿ ವಿಚಾರ ಎಂದರೆ ಸಾಕು ನಾನು ಆ ವಿಚಾರವಾಗಿ ಮಾತನಾಡಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮೌನಕ್ಕೆ ಶರಣಾದರೆ, ಮತ್ತೊಂದೆಡೆ ಈ ಸಮಸ್ಯೆಯನ್ನು ಬಿಜೆಪಿ ನಾಯಕರಿಂದಲೇ ಬಗೆಹರಿಸಲು ಸಾಧ್ಯ. ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಮನವೊಲಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಹೀಗಾಗಿ ರಾಜ್ಯ ಬಿಜೆಪಿ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.


ಫೆಬ್ರವರಿ 6ರಿಂದ ಮಹದಾಯಿ ನ್ಯಾಯಾಧೀಕರಣದ ಮುಂದೆ ನಡೆಯಲಿದೆ ಅಂತಿಮ ಹಂತದ ವಿಚಾರಣೆ
ಫೆಬ್ರವರಿ 6ರಿಂದ ಮಹದಾಯಿ ವಿಚಾರಣೆ ನ್ಯಾಯಾಧೀಕರಣದ ಮುಂದೆ ಬರ್ತಿದೆ. ನ್ಯಾಯಾಧೀಕರಣದ ವಿಚಾರಣೆಗೆ ಗೋವಾ ಸರ್ಕಾರ ಸಜ್ಜಾಗಿದ್ದರೆ, ರಾಜ್ಯ ಸರ್ಕಾರ ಕೂಡ ಜನವರಿ 15 ರಂದೇ ನ್ಯಾಯಾಧೀಕರಣಕ್ಕೆ ತನ್ನ ಲಿಖಿತ ಹೇಳಿಕೆ ನೀಡಿದೆ.


ಮಹದಾಯಿ ವಿಚಾರವಾಗಿ ಗೋವಾ ಸರ್ಕಾರದ ನಿಲುವಿಗೆ ಅಲ್ಲಿನ ವಿರೋಧ ಪಕ್ಷವಾದ ಕಾಂಗ್ರೇಸ್ ತನ್ನ ಬೆಂಬಲ ವ್ಯಕ್ತಪಡಿಸಿದೆ. ಹೀಗಾಗಿ ಗೋವಾದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ನಿಲುವು ಒಂದೇ ಆಗಿದೆ.


ಆದರೆ, ಕರ್ನಾಟಕದಲ್ಲಿ ಬರೀ ಮುಂದಿನ ಚುನಾವಣೆಯ ಮತ ಬೇಟೆಯಲ್ಲಿ ತೊಡಗಿರುವ ಎರಡೂ ರಾಷ್ಟ್ರೀಯ ಪಕ್ಷಗಳು, ಮಹದಾಯಿ ಸಮಸ್ಯೆ ಬಗೆಹರಿಸಲು ಯಾವುದೇ ರೀತಿಯ ಒಮ್ಮತದ ನಿರ್ಧಾರಕ್ಕೆ ಬರಲು ವಿಫಲವಾಗಿವೆ.


ಏತನ್ಮಧ್ಯೆ, ರಾಜಕೀಯ ನಾಯಕರಲ್ಲದೇ, ತಮ್ಮ ಸಮಸ್ಯೆಯನ್ನು ಬೇರಾರು ಬಗೆಹರಿಸಬಲ್ಲರು ಎಂಬ ಆತಂಕ ಮಹದಾಯಿ ಹೋರಾಟಗಾರರಲ್ಲಿ ಮನೆಮಾಡಿದೆ.