ಬೆಂಗಳೂರು: ಬಿಜೆಪಿ ಪರಿವರ್ತನಾ ರ್ಯಾಲಿ ನವೆಂಬರ್ 2ರಿಂದ ಪ್ರಾರಂಭವಾಗಲಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ರ್ಯಾಲಿಯನ್ನು ಉದ್ಘಾಟಿಸಲಿದ್ದಾರೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸದ್ಯದಲ್ಲೇ ಆದೇಶ ನೀಡಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಪರಿವರ್ತನಾ ಜಾಥಾದಲ್ಲಿ ಒಂದು ದಿನ ಕರ್ನಾಟಕಕ್ಕೆ ಪ್ರಧಾನಿ ಮೋದಿ ಆಗಮಿಸುವ ಸಾಧ್ಯತೆ ಇದ್ದು, ಸಮಯ ಇನ್ನೂ ನಿಗದಿಯಾಗಿಲ್ಲ.


COMMERCIAL BREAK
SCROLL TO CONTINUE READING

ಪರಿವರ್ತನಾ ರ್ಯಾಲಿಯಲ್ಲಿ ರಾಷ್ಟ್ರೀಯ ನಾಯಕರು ಪಾಲ್ಗೊಳ್ಳುವ ಸಾಧ್ಯತೆ ಇದೆ. ನವೆಂಬರ್ 2 ರಂದು ನಡೆಯುವ ಪರಿವರ್ತನಾ ರ್ಯಾಲಿಗೆ ಸ್ಥಳ ನಿಗದಿಯಾಗಿದೆ. ಬೆಂಗಳೂರಿನ ಅಂತರಾಷ್ಟ್ರೀಯ ವಸ್ತು ಪ್ರದರ್ಶನಾ ಕೇಂದ್ರವನ್ನು ಬಿ.ಎಸ್.ಯಡಿಯೂರಪ್ಪ ಅಂತಿಮಗೊಳಿಸಲಿದ್ದಾರೆ. ರ್ಯಾಲಿಯಲ್ಲಿ ರಾಷ್ಟ್ರೀಯ ನಾಯಕರು ಆಗಮಿಸುವ ಹಿನ್ನೆಲೆಯಲ್ಲಿ ಇದು ಅನುಕೂಲಕರ ಸ್ಥಳವಾಗಿರುವುದರಿಂದ ಈ ಸ್ಥಳವನ್ನು ಆಯ್ಕೆ ಮಾಡಲಾಗಿದೆ. 


ಪರಿವರ್ತನಾ ರ್ಯಾಲಿಯನ್ನು ಯಶಸ್ವಿಗೊಳಿಸಲು ಬಿಜೆಪಿ ನಿರ್ಧರಿಸಿದ್ದು, ರ್ಯಾಲಿಯ ಸಂಪೂರ್ಣ ಜವಾಬ್ದಾರಿಯನ್ನು ಸಂಸದೆ ಶೋಭಾ ಕರಂದ್ಲಾಜೆಗೆ ನೀಡುವ ಸಾಧ್ಯತೆ ಇದೆ. ಬಿಜೆಪಿ ಪರಿವರ್ತನಾ ರ್ಯಾಲಿ ಯಶಸ್ವಿಯಾಗಿಸಲು ಸಂಚಾಲನಾ ಸಮಿತಿಯನ್ನು ಸರಿಸಲಾಗಿದೆ. ಸಂಚಾಲಕರಾಗಿ ಸಂಸದೆ ಶೋಭಾ ಕರಂದ್ಲಾಜೆ ಆಯ್ಕೆಯಾಗಿದ್ದು, ಸಹ ಸಂಚಾಲಕರಾಗಿ ಬಿಜೆಪಿಯ ಐವರು ನಾಯಕರು ನೇಮಕಗೊಂಡಿದ್ದಾರೆ. 
ಪರಿಷತ್ ಸದಸ್ಯ ರಘುನಾಥ್ ಮಲ್ಕಾಪುರೆ, ರಾಜ್ಯ ಕಾರ್ಯದರ್ಶಿಗಳಾದ ಜಗದೀಶ್ ಹಿರೆಮನಿ, ತಿಂಗಳೇ ವಿಕ್ರಮಾರ್ಜುನ, ಜಯದೇವ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ತಮ್ಮೆಶಗೌಡ ಸಹ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ.


ರ್ಯಾಲಿ ಯಶಸ್ವಿಗೊಳಿಸಲು ಬಿಜೆಪಿ ಮಾಸ್ಟರ್ ಪ್ಲಾನ್, ಪರಿವರ್ತನಾ ರ್ಯಾಲಿ ಯಶಸ್ವಿಗೆ 25 ತಂಡಗಳನ್ನು ರಚನೆ ಮಾಡಲಾಗಿದೆ. ರಥ ವಿನ್ಯಾಸ & ನಿರ್ವಹಣೆ, ಸಾಮಾಜಿಕ ಜಾಲತಾಣ, ಮಾಧ್ಯಮ ನಿರ್ವಹಣೆ, ಸಾರ್ವಜನಿಕ ಸಭೆ ಯಾತ್ರೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ.