ಸಿಎಂ ಕುಮಾರಸ್ವಾಮಿ `ಗ್ರಾಮವಾಸ್ತವ್ಯ-ಶೂನ್ಯ ಸಾಧನೆ` ಎಂದ ಬಿಜೆಪಿ, ಪುಸ್ತಕ ಬಿಡುಗಡೆ
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯವನ್ನು ಕಟುವಾಗಿ ಟೀಕಿಸಿರುವ ಕರ್ನಾಟಕ ಬಿಜೆಪಿ `ಗ್ರಾಮವಾಸ್ತವ್ಯ-ಶೂನ್ಯ ಸಾಧನೆ` ಎಂಬ ಪುಸ್ತಕವನ್ನು ಸೋಮವಾರ ಬಿಡುಗಡೆ ಮಾಡಿತು.
ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯವನ್ನು ಕಟುವಾಗಿ ಟೀಕಿಸಿರುವ ಕರ್ನಾಟಕ ಬಿಜೆಪಿ 'ಗ್ರಾಮವಾಸ್ತವ್ಯ-ಶೂನ್ಯ ಸಾಧನೆ' ಎಂಬ ಪುಸ್ತಕವನ್ನು ಸೋಮವಾರ ಬಿಡುಗಡೆ ಮಾಡಿತು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಈ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡುತ್ತಾ, ಕಳೆದ ಹದಿಮೂರು ತಿಂಗಳ ಆಡಳಿತಾವಧಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಆಡಳಿತ ವೈಫಲ್ಯಗಳ ಬಗ್ಗೆ 10 ಪ್ರಶ್ನೆಗಳನ್ನು ಕೇಳುವ ಮೂಲಕ ಸವಾಲು ಹಾಕಿದರು.
'ಗ್ರಾಮವಾಸ್ತವ್ಯ-ಶೂನ್ಯ ಸಾಧನೆ' ಪುಸ್ತಕದಲ್ಲಿ ಈ ಹಿಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಯಾವ ಯಾವ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ನಡೆಸಿ ಹಲವು ಸವಲತ್ತುಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದರೋ, ಆ ಎಲ್ಲಾ ಗ್ರಾಮಗಳ ಪ್ರಸ್ತುತ ಸ್ಥಿತಿಯ ಬಗ್ಗೆ ವಿವರಿಸಲಾಗಿದೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಪಂಚತಾರ ಹೋಟೆಲ್‌ನಲ್ಲಿ ಕುಳಿತು ಆಡಳಿತ ನಡೆಸಿದ ಕೀರ್ತಿ ಕುಮಾರಸ್ವಾಮಿಗೆ ಸಲ್ಲಬೇಕು. ಅಧಿಕಾರಿಗಳ ಮೇಲೆ ಸಂಪೂರ್ಣ ಹಿಡಿತ ಕಳೆದುಕೊಂಡಿರುವ ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ನಂಬಿಕೆಯೇ ಕಳೆದುಕೊಂಡಿದ್ದಾರೆ. ಈಗ ಮಾತ್ರ ಗ್ರಾಮ ವಾಸ್ತವ್ಯದ ನಾಟಕವಾಡುತ್ತಿದ್ದಾರೆ. ಸಿಎಂ ವಾಸ್ತವ್ಯ ಮಾಡಿದ್ದ ಬಹುತೇಕ ಕಡೆಗಳಲ್ಲಿ ಬಲ್ಬ್, ಹಾಸಿಗೆ, ಸ್ಯಾನಿಟರಿ ಎಲ್ಲವನ್ನು ಜೊತೆಗೇ ಹೊತ್ತೊಯ್ಯಲಾಗಿದೆ. ಇವೆಲ್ಲಾ ನಾಟಕ ಏಕೆ? ಎಂದು ವಾಗ್ದಾಳಿ ನಡೆಸಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್, ಮಾಜಿ ಸಚಿವ ಡಾ ಎ.ಬಿ. ಮಾಲಕರೆಡ್ಡಿ ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ವೈ.ವಿಜಯೇಂದ್ರ, ತಮ್ಮೇಶ ಗೌಡ, ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಎಸ್. ಶಾಂತಾರಾಮ್ ಸೇರಿದಂತೆ ಅನೇಕ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.