ಮೀಸಲಾತಿ ಬಗ್ಗೆ ನಿರ್ಧರಿಸಿದ್ದೇವೆ, ಕ್ರೆಡಿಟ್ ತಗೋಳ್ತೇವೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್
ಅಹಿಂದ ಚಳವಳಿ ಆರಂಭಿಸಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯರವರು ಹಿಂದುಳಿದ ಸಮಾಜಗಳಿಗೆ ನ್ಯಾಯವನ್ನೇ ಕೊಡಲಿಲ್ಲ. ಆಗ ಅಹಿಂದಕ್ಕೆ ನ್ಯಾಯ ಕೊಡದ ಅವರು ಈಗ ನಾವು ಕೊಟ್ಟಾಗ ಅಸಮಾಧಾನ ತೋರಿಸುವುದು ಯಾವ ನ್ಯಾಯ? - ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ರಾಜ್ಯದಲ್ಲಿ ಎಸ್‌ಸಿ-ಎಸ್‌ಟಿ ಮೀಸಲಾತಿ ಕ್ರೆಡಿಟ್ ವಾರ್ ಜೋರಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್,
ಮೀಸಲಾತಿ ಸಂಬಂಧ ನಾವು ನಿರ್ಧಾರ ಮಾಡಿದ್ದೇವೆ. ನಾವು ಕ್ರೆಡಿಟ್ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಎಸ್‌ಸಿ-ಎಸ್‌ಟಿ ಮೀಸಲಾತಿ ಕ್ರೆಡಿಟ್ ವಾರ್ ಕುರಿತಂತೆ ಹಾವೇರಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಅಹಿಂದ ಚಳವಳಿ ಆರಂಭಿಸಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯರವರು ಹಿಂದುಳಿದ ಸಮಾಜಗಳಿಗೆ ನ್ಯಾಯವನ್ನೇ ಕೊಡಲಿಲ್ಲ. ಆಗ ಅಹಿಂದಕ್ಕೆ ನ್ಯಾಯ ಕೊಡದ ಅವರು ಈಗ ನಾವು ಕೊಟ್ಟಾಗ ಅಸಮಾಧಾನ ತೋರಿಸುವುದು ಯಾವ ನ್ಯಾಯ? ಅವರ ಕಾಲಘಟ್ಟದಲ್ಲಿ ಕೊಡುವ ಯೋಗ್ಯತೆ ಇರಲಿಲ್ಲವೇ? ಒಂದು ಆಯೋಗ ರಚಿಸಿ ಏನೂ ತೀರ್ಮಾನ ಕೈಗೊಳ್ಳದ ಸಿಎಂ ಸಿದ್ದರಾಮಯ್ಯ. ವೀರಶೈವ- ಲಿಂಗಾಯತ ಸಮಾಜವನ್ನು ಒಡೆದು ಆಳಿದರು. ಅದು ಬಿಟ್ಟು ಏನು ಮಾಡಿದ್ದಾರೆ. ಅವರಿಗೆ ಎಲ್ಲಿ ನೈತಿಕತೆ ಇದೆ? ಎಂದು ಪ್ರಶ್ನಿಸಿದರು.
ಎರಡು ಸಮುದಾಯಗಳ ಬೇಡಿಕೆ ಅನ್ವಯ ಮೀಸಲಾತಿಯಲ್ಲಿ ಕೆಲ ಬದಲಾವಣೆ ಮಾಡಿ ಅವುಗಳನ್ನು ಈಡೇರಿಸಿದ್ದೇವೆ. ಈ ಸಂಬಂಧ ಇನ್ನೂ ಹತ್ತಾರು ಯೋಚನೆಗಳಿವೆ. ಅವುಗಳನ್ನು ಸರಕಾರ ಮಾಡಲಿದೆ ಎಂದು ಮೀಸಲಾತಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದರು.
ಇದನ್ನೂ ಓದಿ- ವಾಮಮಾರ್ಗದಲ್ಲಿ ಇಡೀ ದೇಶದ ಮೇಲೆ ಹಿಂದಿ ಹೇರಿಕೆ; ಕೇಂದ್ರದ ಮೇಲೆ ಎಚ್ಡಿಕೆ ಕಿಡಿ
ಕೇಂದ್ರ ಸರಕಾರ ಕೊಟ್ಟ ಪಡಿತರ ಅಕ್ಕಿಯನ್ನು ತಾವು ಕೊಟ್ಟಿದ್ದಾಗಿ ಸಿದ್ದರಾಮಯ್ಯರು ತಮ್ಮ ಫೋಟೋ ಹಾಕಿಕೊಂಡಿದ್ದರಲ್ಲವೇ? ಇವರು ಹಣ ಹಾಕಿದ್ದರೇ? ಯಾವ ಯೋಗ್ಯತೆ ಇತ್ತು ಇವರಿಗೆ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ ನಳೀನ್ ಕುಮಾರ್ ಕಟೀಲ್, ನಾವು ಮೀಸಲಾತಿ ನಿರ್ಣಯ ಮಾಡಿದ್ದೇವೆ. ಅದರ ಕ್ರೆಡಿಟ್ ತೆಗೆದುಕೊಳ್ಳಲಿದ್ದೇವೆ ಎಂದರು.
ರಾಹುಲ್ ಗಾಂಧಿಯವರ ಆರೋಪ ಸಂಬಂಧದ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಳೀನ್ ಕುಮಾರ್ ಕಟೀಲ್, ದೇಶದಲ್ಲಿ ಭ್ರಷ್ಟಾಚಾರವನ್ನು ಪ್ರಾರಂಭ ಮಾಡಿದ್ದೇ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯ ತಾತ. ಭ್ರಷ್ಟಾಚಾರದ ಇನ್ನೊಂದು ಹೆಸರೇ ಕಾಂಗ್ರೆಸ್. ಭಯೋತ್ಪಾದನೆಯ ಇನ್ನೊಂದು ಹೆಸರೇ ಕಾಂಗ್ರೆಸ್. ಭ್ರಷ್ಟಾಚಾರದ ಒಬ್ಬ ಫಲಾನುಭವಿ ರಾಹುಲ್ ಗಾಂಧಿ. ಅದಕ್ಕಾಗಿಯೇ ಅವರು ಜಾಮೀನಿನಲ್ಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ- ಒಕ್ಕಲಿಗ ಸಮುದಾಯದಿಂದ 10% ಮೀಸಲಾತಿ ಹೆಚ್ಚಳಕ್ಕೆ ಮನವಿ: ಸಚಿವ ಆರ್. ಅಶೋಕ್ ಹೇಳಿದ್ದೇನು?
ಜನಸಂಕಲ್ಪ ಯಾತ್ರೆಗಳನ್ನು ಆರಂಭಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಹಿರಿಯರಾದ ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಯಚೂರು ಕಡೆಯಿಂದ ಪ್ರವಾಸ ನಡೆಸಲಾಗುತ್ತಿದೆ. ನಾನು ಬೆಳಗಾವಿಯಿಂದ ಪ್ರವಾಸ ಆರಂಭಿಸಿದ್ದು, ಇವತ್ತು ಹಾವೇರಿ ಜಿಲ್ಲೆಯಲ್ಲಿದ್ದೇನೆ. ಚುನಾವಣೆ ಎದುರಿಸುವ ಸಂಬಂಧ ತಯಾರಿ ದೃಷ್ಟಿಯಿಂದ ಮತ್ತು ಕಾರ್ಯಕರ್ತರನ್ನು ಸನ್ನದ್ಧಗೊಳಿಸಲು ಪ್ರವಾಸ ನಡೆಯುತ್ತಿದೆ. ಜನ ಸಂಕಲ್ಪ ಯಾತ್ರೆ ಮೂಲಕ ನಮ್ಮ ಕೇಂದ್ರ- ರಾಜ್ಯ ಸರಕಾರಗಳ ಜನಪರ ಯೋಜನೆಗಳ ಕುರಿತು ಜನರಿಗೆ ಮನದಟ್ಟು ಮಾಡಲಾಗುತ್ತದೆ ಎಂದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.