ಬೆಂಗಳೂರು : ಬಿಜೆಪಿಯವರು ಮಾಡುತ್ತಿರುವುದು ಪರಿವರ್ತನಾ ಯಾತ್ರೆ ಅಲ್ಲ, ಪಶ್ಚಾತ್ತಾಪದ ನಾಟಕ ಯಾತ್ರೆ. ಮಾಡಿದ ಪಾಪ ಅವರನ್ನು ಕೊರೆಯುತ್ತಿದೆ. ಅದಕ್ಕಾಗಿ ಪ್ರಾಯಶ್ಚಿತ್ತದ ನಾಟಕ ಮಾಡುತ್ತಾ ಹೊರಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‎ರಾಜ್ಯದ ಜನ ರಾಜಕೀಯವಾಗಿ ಪ್ರಬುದ್ಧರಿದ್ದಾರೆ. ಯಾವ ಪಕ್ಷದ ಯಾವ ನಾಯಕರು ಹೇಗೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಅವರಿಗೆ ಇದೆ ಎಂದು ತಿಳಿಸಿದ್ದಾರೆ. 


ಬಿಜೆಪಿ ಪರಿವರ್ತನಾ ಯಾತ್ರೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಯವರು- ಪರಿವರ್ತನೆ ಆಗಬೇಕಿರುವುದು ಬಿಜೆಪಿ ನಾಯಕರು. ಹಿಂದುತ್ವದ ಹೆಸರಿನಲ್ಲಿ ಸಮಾಜದ ಸಾಮರಸ್ಯ ಹಾಳು ಮಾಡಿ ಮನುಷ್ಯ ಮನುಷ್ಯರ ನಡುವೆ, ಧರ್ಮ ಧರ್ಮದ ಮಧ್ಯೆ ಸಂಘರ್ಷ ಉಂಟು ಮಾಡಿ ಕೋಮು ಸೌಹಾರ್ದತೆಯನ್ನು ಯಾವಾಗಲೂ ಅವರು ಹಾಳು ಮಾಡುತ್ತಾರೆ. ಹೀಗಾಗಿ ಪರಿವರ್ತನೆ ಆಗಬೇಕಿರುವುದು ಬಿಜೆಪಿ ನಾಯಕರಲ್ಲಿ. ಜನ ಈಗಾಗಲೇ ರಾಜಕೀಯವಾಗಿ ಸಾಕಷ್ಟು ಪ್ರಬುದ್ಧರಾಗಿದ್ದಾರೆ. ಸೂಕ್ತ ತೀರ್ಮಾನ ಕೈಗೊಳ್ಳುವ ಶಕ್ತಿ ಅವರಿಗೆ ಇದೆ. ಪರಿವರ್ತನಾ ರ್ಯಾಲಿ ಜನತೆಯ ದೃಷ್ಟಿಯಿಂದ ಅನಗತ್ಯ. ಮತ್ತೆ ಕಾಂಗ್ರೆಸ್‍ಗೆ ಆಶೀರ್ವಾದ ಮಾಡಲು ಜನತೆ ಈಗಾಗಲೇ ತೀರ್ಮಾನ ಮಾಡಿದ್ದಾರೆ ಎಂದು ತಿಳಿಸಿದರು. 


ನಾನು ಕಳೆದ 35 ವರ್ಷಗಳಿಂದ ರಾಜ್ಯದ ನಾನಾ ಕಡೆ ಪ್ರವಾಸ ಕೈಗೊಂಡಿದ್ದೇನೆ. ಎಲ್ಲ ವಿಧಾನಸಭೆ ಕ್ಷೇತ್ರಗಳಿಗೆ ಹತ್ತಾರು ಬಾರಿ ಭೇಟಿ ಕೊಟ್ಟಿದ್ದೇನೆ. ಜನರ ನಾಡಿ ಮಿಡಿತ ಗೊತ್ತಿದೆ. ನನಗೆ. ಮೊದಲ ಬಾರಿಗೆ ಅಧಿಕಾರ ಕೊಟ್ಟಾಗ ಬಿಜೆಪಿಯವರು ಮಾಡಿದ ಭ್ರಷ್ಟಾಚಾರ, ಹಗರಣಗಳು, ಅನೀತಿ ಕೆಲಸಗಳನ್ನು ಜನ ಮರೆತಿಲ್ಲ. 


ಬಿಜೆಪಿ ಆಡಳಿತದ ಐದು ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳಾದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರತ್ಯಕ್ಷವಾಗಿಯೇ ರೆಡ್ಡಿ ಸಹೋದರರು ರಾಜ್ಯದ ಸಂಪತ್ತು ಲೂಟಿ ಮಾಡಿದರು. ಅದಕ್ಕೆ ಯಡಿಯೂರಪ್ಪ ಅವರೇ ಅವಕಾಶ ಮಾಡಿಕೊಟ್ಟರು. ಭ್ರಷ್ಟಾಚಾರದ ಹಣಕ್ಕಾಗಿ ಯಡಿಯೂರಪ್ಪ ಅವರು ರೆಡ್ಡಿ ಸಹೋದರರನ್ನು ಫ್ರೀಯಾಗಿ ಬಿಟ್ಟರು. ಲೋಕಾಯುಕ್ತರಾಗಿದ್ದಾಗ ನೀಡಿದ ವರದಿಯಲ್ಲಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರೇ ಈ ವಿಷಯ ತಿಳಿಸಿದ್ದಾರೆ.


ರೆಡ್ಡಿ ಸಹೋದರರು ಬಳ್ಳಾರಿಯನ್ನು ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ್ದಾರೆ ಎಂದೂ ಹೆಗ್ಡೆ ಅವರು ತಮ್ಮ ವರದಿಯಲ್ಲಿ ಹೇಳಿದ್ದಾರೆ. ಅಷ್ಟರ ಮಟ್ಟಿಗೆ ರೆಡ್ಡಿ ಸಹೋದರರು ನಿರಂಕುಶ ಆಡಳಿತವನ್ನು ನಡೆಸಿದರು. ಸಾವಿರಾರು ಕೋಟಿ ರೂ. ಮೌಲ್ಯದ ಕಬ್ಬಿಣದ ಅದಿರು ಲೂಟಿ ಮಾಡಿದರು. ಅದಕ್ಕೆ ಯಡಿಯೂರಪ್ಪ ಅವರ ಕುಮ್ಮಕ್ಕು ಸಹ ಇತ್ತು ಎಂದು ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.