ನೇತ್ರಾವತಿ ನದಿಯ ಹಿನ್ನೀರಿನಲ್ಲಿ ವಿ.ಜಿ. ಸಿದ್ಧಾರ್ಥ್ ಮೃತದೇಹ ಪತ್ತೆ
ಕೆಫೆ ಕಾಫಿ ಡೇ ಸ್ಥಾಪಕ ಮತ್ತು ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಅಳಿಯ ವಿ.ಜಿ ಸಿದ್ಧಾರ್ಥ ಅವರ ಮೃತ ದೇಹವು ಮಂಗಳೂರಿನ ಹೊಯ್ಗೆ ಬಜಾರ್ ಬಳಿ ನೇತ್ರಾವತಿ ನದಿಯ ದಡದಲ್ಲಿ ಪತ್ತೆಯಾಗಿದೆ.
ಮಂಗಳೂರು : ಸೋಮವಾರ ರಾತ್ರಿ ಮಂಗಳೂರಿನ ನೇತ್ರಾವತಿ ಸೇತುವೆ ಬಳಿ ನಿಗೂಢವಾಗಿ ಕಣ್ಮರೆಯಾಗಿದ್ದ, ಮಾಜಿ ಸಿಎಂ ಎಸ್. ಎಂ. ಕೃಷ್ಣ ಅವರ ಅಳಿಯ, ಕೆಫೆ ಕಾಫಿ ಡೇ ಮಾಲೀಕ ವಿ.ಜಿ. ಸಿದ್ದಾರ್ಥ್ ಅವರ ಮೃತದೇಹ ನೇತ್ರಾವತಿ ನದಿಯ ಹಿನ್ನೀರಿನಲ್ಲಿ ಪತ್ತೆಯಾಗಿದೆ.
ನೇತ್ರಾವತಿ ನದಿಯಲ್ಲಿ 36 ಗಂಟೆಗಳ ತೀವ್ರ ಶೋಧ ಕಾರ್ಯಾಚರಣೆಯ ನಂತರ ನೇತ್ರಾವತಿ ನದಿಯ ಹಿನ್ನೀರು ಪ್ರದೇಶದ ಹೊಯ್ಗೆ ಬಜಾರ್ ನಲ್ಲಿ ಬುಧವಾರ ಮುಂಜಾನೆ ಮೃತ ದೇಹ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ.
ಸೋಮವಾರ ಸಕಲೇಶಪುರಕ್ಕೆ ಹೋಗುವುದಾಗಿ ತಿಳಿಸಿ ಬೆಂಗಳೂರಿನಿಂದ ತಮ್ಮ ಇನೋವಾ ಕಾರಿನಲ್ಲಿ ತೆರಳಿದ್ದ ಸಿದ್ಧಾರ್ಥ್, ರಾತ್ರಿ 7.30 ರ ಸುಮಾರಿಗೆ ಕಾರಿನಲ್ಲಿ ಚಾಲಕನ ಜೊತೆ ಉಳ್ಳಾಲದತ್ತ ತೆರಳಿ ಕಾರನ್ನು ಒಂದು ಸೇತುವೆ ಬಳಿ ನಿಲ್ಲಿಸಲು ಹೇಳಿ, ಫೋನಿನಲ್ಲಿ ಮಾತನಾಡುತ್ತಾ ಏಕಾಂಗಿಯಾಗಿ ಸೇತುವೆಯಲ್ಲಿ ನಡೆದುಕೊಂಡು ಹೋಗಿದ್ದರು. ಒಂದು ಗಂಟೆ ಮೇಲಾದರೂ ಮಾಲೀಕ ಸಿದ್ಧಾರ್ಥ್ ಬರದಿದ್ದನ್ನು ಕಂಡ ಚಾಲಕ ಸಿದ್ದಾರ್ಥ್ ಅವರಿಗೆ ಕರೆ ಮಾಡಿದ್ದಾನೆ. ಅವರ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಆತಂಕಗೊಂಡು ಚಾಲಕ ಪೊಲೀಸ್ ಹಾಗೂ ಕುಟುಂಬದವರಿಗೆ ಮಾಹಿತಿ ನೀಡಿದ್ದರು.
ಮಾಹಿತಿ ತಿಳಿದ ಪೊಲೀಸರು, ಅಗ್ನಿಶಾಮಕ ದಳ ಮತ್ತು ಮುಳುಗು ತಜ್ಞರು ನೇತ್ರಾವತಿ ನದಿಯಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದರು. ಸತತ 36 ಗಂಟೆಗಳ ತೀವ್ರ ಶೋಧ ಕಾರ್ಯಾಚರಣೆಯ ನಂತರ ಇಂದು ಮುಂಜಾನೆ ವಿ.ಜಿ.ಸಿದ್ದಾರ್ಥ್ ಅವರ ಮೃತ ದೇಹ ಪತ್ತೆಯಾಗಿದೆ.