ಸರ್ಕಾರಕ್ಕೆ ಒಳ್ಳೆ ಹೆಸರು ತನ್ನಿ,ಇಲ್ಲ ಬೇರೆ ಜಾಗ ನೋಡಿಕೊಳ್ಳಿ: ಅಧಿಕಾರಿಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಎಚ್ಚರಿಕೆ
DK Shivakumar : ಸರ್ಕಾರಕ್ಕೆ ಒಳ್ಳೆ ಹೆಸರು ತರುವ ಕೆಲಸ ಮಾಡಬೇಕು, ಇಲ್ಲದಿದ್ದರೆ ಬೇರೆ ಜಾಗ ನೋಡಿಕೊಳ್ಳಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಬೆಂಗಳೂರು: ಬನಶಂಕರಿಯ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ 2023-24 ಮೊದಲ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು ಹೇಳಿದ್ದಿಷ್ಟು: ಪ್ರತಿ ಹಳ್ಳಿ, ಪ್ರತಿ ಪಂಚಾಯಿತಿಯಲ್ಲೂ ಕುಡಿಯುವ ನೀರಿನ ಸ್ಥಿತಿಗತಿ ಅರಿತು ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಬೇಕು.
ಮಳೆ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಇದರ ನಿವಾರಣೆಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ನೀರಿಗಾಗಿ ನಾವು ಬಡಿದಾಡುತ್ತಾ ಇದ್ದೇವೆ. ಆದರೆ ನಿಮ್ಮ ಬಳಿ ಮಾಹಿತಿಯೇ ಇಲ್ಲ.
ಎಷ್ಟು ಶುದ್ಧ ನೀರು ಪೂರೈಕೆ ಘಟಕಗಳು (RO) ಗಳು ಇವೆ. ನಿತ್ಯ ಎಷ್ಟು ನೀರು ಪೂರೈಕೆ ಆಗುತ್ತಿದೆ. ಎಷ್ಟು ಜನ ಬಳಸುತ್ತಿದ್ದಾರೆ ಎಂಬ ವಿವರವೇ ನಿಮ್ಮ ಬಳಿ ಇಲ್ಲ. ಸಭೆಗೆ ಬರುವ ಮುನ್ನ ಸಿದ್ಧತೆಯನ್ನೇ ಮಾಡಿಕೊಂಡು ಬಂದಿಲ್ಲ. ಸಭೆಯ ಗಂಭೀರತೆಯೇ ನಿಮಗೆ ಅರ್ಥವಾಗಿಲ್ಲ.
"ಪ್ರತಿ ಕಚೇರಿಯಲ್ಲಿ ಏನು ಕೆಲಸ ನಡೆಯುತ್ತದೆ ಎನ್ನುವ ವರದಿ ಪಡೆದುಕೊಳ್ಳುವ ವ್ಯವಸ್ಥೆ ನನ್ನ ಬಳಿ ಇದೆ. ನಾನು ಅದನ್ನು ಬಿಚ್ಚಿ ನಿಮ್ಮ ಮರ್ಯಾದೆ ತೆಗೆದರೆ, ಮಾಧ್ಯಮಡವರು ನಿಮ್ಮ ಜನ್ಮ ಜಾಲಾಡಿ ಬಿಡುತ್ತಾರೆ. ಆದರೆ ಆ ಕೆಲಸವನ್ನು ನಾನು ಮಾಡುವುದಿಲ್ಲ"
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾಣಿಗಳ ಸಾವು-ನೋವು, ಡೆಂಗ್ಯೂ ಜ್ವರ, ಮಳೆ ಕೊರತೆ, ಬರ, ಕುಡಿಯುವ ನೀರು ಮತ್ತಿತರ ವಿಚಾರಗಳ ಬಗ್ಗೆ ಒಬ್ಬರೂ ವರದಿ ಕೊಟ್ಟಿಲ್ಲ.
ಅಧಿಕಾರಿಗಳೇ ನಿಮಗೆ ಹೇಳೋರು, ಕೇಳೋರು ಯಾರೂ ಇಲ್ಲ ಅಂತಾ ತಿಳಿದುಕೊಂಡಿದ್ದೀರಾ? ನಿಮಗೆ ಕೆಲಸ ಮಾಡೋ ಆಸಕ್ತಿ ಇಲ್ಲ ಅಂದ್ರೆ ಜಾಗ ಖಾಲಿ ಮಾಡಿ. ನಿಮ್ಮದೇ ಲೋಕದಲ್ಲಿ ವಿಹರಿಸುತಿದ್ದೀರಿ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಪ್ರಮುಖ ಆಗುಹೋಗುಗಳ ಬಗ್ಗೆ ವರದಿ ಕೊಡಬೇಕೆಂಬ ಕನಿಷ್ಟ ಸೌಜನ್ಯ ನಿಮಗೆ ಇಲ್ಲವೇ?
ಇದನ್ನೂ ಓದಿ-ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣಾರ್ಭಟ..!
ಆಡಳಿತ ಹಾಗೂ ವಿರೋಧ ಪಕ್ಷದ ಶಾಸಕರ ಕೆಲಸಗಳನ್ನು ಸಮಾನವಾಗಿ ಮಾಡಿ. ಜನರು ಸರ್ಕಾರಿ ಕಚೇರಿಗಳಿಗೆ ತಮ್ಮ ಕಷ್ಟಗಳನ್ನು ಬಗೆಹರಿಸಿಕೊಳ್ಳಲು ಬರುತ್ತಾರೆ. ಅವರ ಕೆಲಸಗಳನ್ನು ವಿಳಂಬವಿಲ್ಲದೆ ಸೂಕ್ತ ಕಾಲದಲ್ಲಿ ಮಾಡಿಕೊಡಬೇಕು.
ಕಂದಾಯ ವಿಭಾಗದಲ್ಲಿನ ಮನೆ, ಜಮೀನು ಖಾತೆ ಮಾಡಿಕೊಡಲು ಕಿರುಕುಳ ಸೇರಿದಂತೆ ಕಂದಾಯ ನಿವೇಶನಗಳ ಹೆಚ್ಚಳಕ್ಕೆ ಅಧಿಕಾರಗಳ ಕುಮ್ಮಕ್ಕು ಕಾರಣ. ಹೊಸ ಸರ್ಕಾರ ಹೊಸ ಆಶಯಗಳೊಟ್ಟಿಗೆ ಕೆಲಸ ಮಾಡುತ್ತಿದೆ. ನೀವುಗಳು ಅದರಂತೆ ಕೆಲಸ ಮಾಡಬೇಕು.
ಬಿಡಿಎ ಬೆಂಗಳೂರನ್ನು ವ್ಯವಸ್ಥಿತ ನಗರವನ್ನಾಗಿ ಬೆಳೆಸಲು ಕಷ್ಟಪಡುತ್ತಿದ್ದರೆ, ಜಿಲ್ಲಾ ಪಂಚಾಯಿತಿ ಹಾಗೂ ಇತರೇ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಅವ್ಯವಸ್ಥಿತ ನಗರವನ್ನಾಗಿ ಬೆಳೆಯಲು ಕಾರಣಕರ್ತರಾಗುದ್ದೀರಿ. ಹೊಸದಾಗಿ 110 ಹಳ್ಳಿಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಅವುಗಳು ಇನ್ನೂ ಅಭಿವೃದ್ಧಿಯಾಗದೆ ಅತಂತ್ರ ಸ್ಥಿತಿಯಲ್ಲಿವೆ.
ಬೆಂಗಳೂರು ನಗರದಲ್ಲಿ ಸ್ಥಳೀಯರು ಶೇ 30 ರಷ್ಟಿದ್ದರೆ ವಲಸಿಗರು ಶೇ 70 ರಷ್ಟಿದ್ದಾರೆ. ಇವರ ಮೇಲೆ ಪ್ರತಿ ಸಂದರ್ಭದಲ್ಲಿ ಶೋಷಣೆ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಜನರ ಮೇಲೆ ಎಲ್ಲಾ ರೀತಿಯ ಕಿರುಕುಳ ನಿಲ್ಲಬೇಕು ಎಂದರು.
ಕಸ ವಿಲೇವಾರಿ ಸಮಸ್ಯೆ, ರಸ್ತೆಬದಿಯಲ್ಲೇ ಕಸ ಸುರಿಯುತ್ತಿರುವುದು, ಎಲ್ಲೆಂದರಲ್ಲಿ ವೈದ್ಯಕೀಯ ತ್ಯಾಜ್ಯ ಸುರಿಯುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜತೆಗೆ ಈ ಬಗ್ಗೆ ಜಿಲ್ಲಾಧಿಕಾರಿಗಳು, ಸಿಇಒ, ಪೊಲೀಸ್ ಅಧಿಕಾರಿಗಳು, ಆರ್ ಟಿಒ ಅಧಿಕಾರಿಗಳು, ಪಾಲಿಕೆ ಅಧಿಕಾರಿಗಳು ಈ ಬಗ್ಗೆ ಸಭೆ ನಡೆಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ತಾಲ್ಲೂಕು ಪಂಚಾಯಿತಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಂದಾಯ ಸೇರಿದಂತೆ ಕ್ಷೇತ್ರ ಅಭಿವೃದ್ಧಿ ವಿಚಾರವಾಗಿ ಯಾವ ಕ್ರಮಗಳನ್ನು ಕೈಗೊಂಡಿದ್ದೀರಿ ಎನ್ನುವುದನ್ನು ವಿವರಿಸಬೇಕಾಗಿ ತಾಕೀತು ಮಾಡಿದರು.
ಇದನ್ನೂ ಓದಿ-ಸಿದ್ದರಾಮಯ್ಯ ಸರ್ಕಾರದಲ್ಲಿ ಮತ್ತೆ ಮುನ್ನೆಲೆಗೆ ಬಂದ ನೈಸ್ ಅಕ್ರಮ
ಗೈರು ಅಧಿಕಾರಿಗಳ ಅಮಾನತಿಗೆ ಡಿಸಿಎಂ ಸೂಚನೆ
ಬೆಂಗಳೂರು ನಗರ ಜಿಲ್ಲೆ ಪಂಚಾಯಿತಿಯ ಕೆಡಿಪಿ ಸಭೆಗೆ ಗೈರಾದ ಅಧಿಕಾರಿಗಳ ಅಮಾನತಿಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಆದೇಶ ನೀಡಿದರು.
ಸಭೆಯ ಆರಂಭದಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ (EE) ಎಲ್ಲಿ ಎಂದು ಕೇಳಿದರು. ಅವರು ಹೊಸಕೋಟೆ ಜನತಾ ದರ್ಶನ ಸಭೆಗೆ ಹೋಗಿದ್ದಾರೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು. ಹಾಗಾದರೆ ಈ ಮೀಟಿಂಗ್ ಯಾಕಾಗಿ ಮಾಡುತ್ತಿದ್ದೇವೆ ಎಂದು ಡಿಸಿಎಂ ಕೇಳಿದರು.
ತಕ್ಷಣವೇ ಆ ಅಧಿಕಾರಿಯನ್ನು ಅಮಾನತು ಮಾಡುವಂತೆ CEO ಕಾಂತರಾಜ್ ಅವರಿಗೆ ಸೂಚನೆ ನೀಡಿದರು. ಕೋರ್ಟ್ ವಿಚಾರ ಬಿಟ್ಟು ಬೇರೆ ಕಾರಣಗಳನ್ನು ನೀಡಿ ಈ ಸಭೆಗೆ ಗೈರಾಗಿರುವ ಅಧಿಕಾರಿಗಳ ಹೆಸರನ್ನು ಪಟ್ಟಿ ಮಾಡಿ, ಅವರನ್ನು ಸೇವೆಯಿಂದ ಸಸ್ಪೆಂಡ್ ಮಾಡಿ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು CEO ಅವರಿಗೆ ಆದೇಶ ನೀಡಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.